ಮುಂಬಯಿ: ಈಗಾಗಲೇ ಏಷ್ಯಾಕಪ್‌ಗೆ(Asia Cup 2023) ಬಹುತೇಕ ಎಲ್ಲ ದೇಶಗಳು ತಂಡವನ್ನು ಪ್ರಕಟಿಸಿದೆ. ಆದರೆ ಭಾರತ ಮಾತ್ರ ತಂಡ ಪ್ರಕಟಕ್ಕೆ ಮೀನಮೇಷ ಎಣಿಸುತ್ತಿದೆ. ಇದಕ್ಕೆ ಕಾರಣ ಕೆ.ಎಲ್ ರಾಹುಲ್(KL Rahul) ಮತ್ತು ಶ್ರೇಯಸ್ ಅಯ್ಯರ್(Shreyas Iyer) ಅವರ ಫಿಟ್‌ನೆಸ್. ರಾಹುಲ್ ಮತ್ತು ಅಯ್ಯರ್ ಆಗಸ್ಟ್ 18 ಶುಕ್ರವಾರದಂದು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಫಲಿತಾಂಶದ ವರದಿಯ ಬಳಿಕ ತಂಡ ಪ್ರಕಟಗೊಳ್ಳುವುದು ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ದ್ರಾವಿಡ್ ಜತೆ ಸಭೆ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(Jay Shah) ಅವರು ಕೋಚ್ ರಾಹುಲ್ ದ್ರಾವಿಡ್(Rahul Dravid) ಜತೆ ಸಭೆಯೊಂದನ್ನು ಮಾಡಲಿದ್ದು ಈ ಸಭೆಯಲ್ಲಿ ಏಷ್ಯಾ ಕಪ್ ಮತ್ತು ವಿಶ್ವಕಪ್ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ಇದಲ್ಲದೆ ವಿಂಡೀಸ್ ವಿರುದ್ಧದ ಟಿ20 ಸರಣಿ ಸೋಲಿಗೆ ಪ್ರಮುಖ ಕಾರಣವನ್ನು ಚಿರ್ಚಿಸುವ ಸಾಧ್ಯತೆಯೂ ಇದೆ. ವಿಶ್ವಕಪ್‌ಗೆ ಸಂಭಾವ್ಯ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುವ ನಿರೀಕ್ಷೆ ಇದೆ. ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ 15ರ ಬದಲಾಗಿ 18 ಮಂದಿ ಸದಸ್ಯರ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಒಂದೊಮ್ಮೆ ಗಾಯಗೊಂಡರೆ ಆಗ ಹೆಚ್ಚುವರಿ ಮೂರು ಆಟಗಾರರಿಂದ ಆಯ್ಕೆ ಮಾಡುವುದು ಅವರ ಯೋಜನೆಯಾಗಿದೆ.
ಬ್ಯಾಟಿಂಗ್ ಅಭ್ಯಾಸ ಮಾಡಿದ ರಾಹುಲ್-ಅಯ್ಯರ್
ಸೋಮವಾರವಷ್ಟೇ ಬೆಂಗಳೂರಿನ ಎನ್ಸಿಎಯಲ್ಲಿ ದೀರ್ಘ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿರುವ ಕೆ.ಎಲ್ ರಾಹುಲ್(KL Rahul) ಮತ್ತು ಶ್ರೇಯಸ್ ಅಯ್ಯರ್(Shreyas Iyer) ಸಂಪೂರ್ಣ ಫಿಟ್ ಆದಂತೆ ತೋರುತ್ತಿದೆ. ಈ ಹಿಂದೆ ಉಭಯ ಆಟಗಾರರು ಸಂಪೂರ್ಣ ಫಿಟ್ ಆಗಿಲ್ಲ ಎಂದು ಹೇಳಲಾಗಿತ್ತು. ಆದರೆ ಸೋಮವಾರ ಇವರಿಬ್ಬರ ಬ್ಯಾಟಿಂಗ್ ಅಭ್ಯಾಸ ಕಂಡ ಆಯ್ಕೆ ಸಮಿತಿ ತೃಪ್ತಿಗೊಂಡಿದೆ ಎನ್ನಲಾಗಿದೆ. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡುವುದು ಖಚಿತವಾಗಿದ್ದರೂ ಶುಕ್ರವಾರ ನಡೆಯುವ ಫಿಟ್‌ನೆಸ್ ವರದಿ ಅಂತಿಮವಾಗಿರಲಿದೆ.
ಭಾರತ-ಪಾಕ್ ಮುಖಾಮುಖಿ
ಈಗಾಗಲೇ ಈ ಟೂರ್ನಿಯ ಆತಿಥೇಯ ಪಾಕಿಸ್ತಾನ ಸೇರಿ ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸಾಂಪ್ರದಾಯಿಯ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕ್ ನಡುವಣ ಪಂದ್ಯ ಸೆಪ್ಟಂಬರ್ 2ರಂದು ಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. 50 ಓವರ್ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.
ಇದನ್ನೂ ಓದಿ Asia Cup: ಸ್ಟಾರ್ ಆಟಗಾರರನ್ನು ಹೊರಗಿಟ್ಟು ಏಷ್ಯಾ ಕಪ್‌ಗೆ ತಂಡ ಪ್ರಕಟಿಸಿದ ರವಿಶ್ರಾಸ್ತ್ರಿ
ತಿಲಕ್ ವರ್ಮಾ ಆಯ್ಕೆ ಸಾಧ್ಯತೆ
ವಿಂಡೀಸ್ ವಿರುದ್ಧ ಆಡಿದ ಟಿ20 ಸರಣಿಯಲ್ಲಿ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ತೋರಿದ ತಿಲಕ್ ವರ್ಮಾ ಅವರ ಮೇಲೂ ಆಯ್ಕೆ ಸಮಿತಿಯೊಂದು ಕಣ್ಣಿಟ್ಟಿದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ತಿಲಕ್ ವರ್ಮ(tilak varma) ಅವರನ್ನು ಏಷ್ಯಾಕಪ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯೂ ದಟ್ಟವಾಗಿದೆ. ಈ ಮೂಲಕ ವಿಶ್ವಕಪ್ಗೂ ಮುನ್ನ ಪ್ರಯೋಗವೊಂದನ್ನು ನಡೆಸಲು ಆಯ್ಕೆ ಸಮಿತಿ ಮುಂದಾಗಿದೆ.