ದುಬೈ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜೀಮ್ ಸೇಥಿ ಅವರು ಏಷ್ಯಾ ಕಪ್(Asia Cup) 2023ರ ಕುರಿತು ಎಸಿಸಿ ಅಧ್ಯಕ್ಷ ಜಯ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಆತಿಥ್ಯ ವಹಿಸಲಿರುವ 2023ರ ಆವೃತ್ತಿಯ ಏಷ್ಯಾ ಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲೇ ನಡೆಸುವಂತೆ ನಜೀಮ್ ಸೇಥಿ ಎಲ್ಲ ರೀತಿಯಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಮೊದಲು ಏಷ್ಯಾ ಕಪ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುವುದು ಎಂದು ಕಳೆದ ವರ್ಷ ಜಯ್ ಶಾ ಹೇಳಿದ್ದರು. ಇದೇ ವಿಚಾರವಾಗಿ ಚರ್ಚೆ ನಡೆಸಲು ಸೇಥಿ ಅವರು ಜಯ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇಂಟರ್ನ್ಯಾಷನಲ್ ಟಿ20 ಲೀಗ್ ಉದ್ಘಾಟನಾ ಸಮಾರಂಭಕ್ಕಾಗಿ ದುಬೈಗೆ ಬಂದ ವೇಳೆ ನಜೀಮ್ ಸೇಥಿ ಎಸಿಸಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಅವರು ಏಷ್ಯಾ ಕಪ್ 2023ರ ಚರ್ಚೆಗಾಗಿ ಫೆಬ್ರವರಿಯಲ್ಲಿ ಅಧ್ಯಕ್ಷ ಜಯ್ ಶಾ ಅವರನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಿಸಿಬಿ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಅವರು, ಭಾರತ ತಂಡವು ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸದಿದ್ದರೆ ಅಥವಾ ಆತಿಥ್ಯದ ಹಕ್ಕನ್ನು ಹಿಂತೆಗೆದುಕೊಂಡರೆ ಪಾಕಿಸ್ತಾನ ತಂಡವು ವಿಶ್ವಕಪ್ 2023ರಿಂದ ಹಿಂದೆ ಸರಿಯುವುದನ್ನು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ನೂತನ ಅಧ್ಯಕ್ಷರಾಗಿರುವ ಸೇಥಿ ಪರಸ್ಪರ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಸಭೆಗೆ ಜಯ್ ಶಾ ಹೋಗಲಿದ್ದಾರಾ ಎಂಬುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ | BCCI Selection Committee | ಮತ್ತೆ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಚೇತನ್ ಶರ್ಮಾ ಸಾರಥ್ಯ; ಬಿಸಿಸಿಐ ಅಧಿಕೃತ ಪ್ರಕಟಣೆ