ಮುಂಬಯಿ: ಏಷ್ಯಾ ಕಪ್(Asia Cup) ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜತೆ ತಿಕ್ಕಾಟ ನಡೆಸಿದ್ದ ಬಿಸಿಸಿಐ(BCCI) ಕಾರ್ಯದರ್ಶಿ ಜಯ್ ಶಾ(Jay Shah) ಅವರನ್ನು ಪಾಕಿಸ್ತಾನಕ್ಕೆ ಬರುವಂತೆ ಪಿಸಿಬಿ(PCB) ಆಹ್ವಾನಿಸಿದೆ. ಆಗಸ್ಟ್ 30ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದೆ.
ಜಯ್ ಶಾ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲು ಒಂದು ಪ್ರಮುಖ ಕಾರಣವಿದೆ. ಶಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ(Asian Cricket Council) ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರನ್ನು ಆಹ್ವಾನಿಸಲಾಗಿದೆ. ಇವರ ಜತೆ ಈ ಸಮಿತಿಯಲ್ಲಿರುವ ಎಲ್ಲ ಸದ್ಯರಿಗೂ ಆಮಂತ್ರಣ ನೀಡಲಾಗಿದೆ. ಆದರೆ ಜಯ್ ಶಾ ಅವರು ಪಾಕಿಸ್ತಾನಕ್ಕೆ ತೆರಳಲಿದ್ದಾರಾ ಎಂದು ಕಾದು ನೋಡಬೇಕಿದೆ.
“ಜಯ್ ಶಾ ಅವರಿಗೆ ಏಷ್ಯಾ ಕಪ್ ಟೂರ್ನಿಯ ಸಲುವಾಗಿ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನ ಕಳುಹಿಸಲಾಗಿದೆ. ಏಕೆಂದರೆ ಅವರು ಏಷ್ಯನ್ ಕ್ರಿಕೆಟ್ ಕೌನಿಲ್ಸ್ನ ಅಧ್ಯಕ್ಷರಾಗಿದ್ದಾರೆ. ನಮ್ಮ ಆಹ್ವಾನದಂತೆ ಜೈ ಶಾ ಪಾಕ್ಗೆ ಬರುವು ನಿರೀಕ್ಷೆ ಇದೆ” ಎಂದು ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ತಿಳಿಸಿದ್ದಾರೆ. ಈ ಹಿಂದೆ ಡರ್ಬನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಜಯ್ ಶಾ ಮತ್ತು ಝಾಕಾ ಅಶ್ರಫ್ ಭೇಟಿಯಾಗಿದ್ದರು. ಇಲ್ಲಿ ಅಶ್ರಫ್ ಅವರು ಜಯ್ ಶಾಗೆ ಮೌಖಿಕವಾಗಿ ಪಾಕ್ಗೆ ಬರುವಂತೆ ಕರೆದಿದ್ದರು. ಆದರೆ ಈಗ ಔಪಚಾರಿಕವಾಗಿ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಪಿಸಿಬಿ ಮೂಲಗಳು ಮಾಹಿತಿ ನೀಡಿದೆ.
ಇದನ್ನೂ ಓದಿ Asia Cup 2023: ಏಷ್ಯಾಕಪ್ ಪಂದ್ಯಗಳ ಸಮಯ ನಿಗದಿಪಡಿಸಿದ ಏಷ್ಯನ್ ಕೌನ್ಸಿಲ್
ಏಷ್ಯಾ ಕಪ್ ವಿಚಾರದಲ್ಲಿ ಕಿತ್ತಾಟ
ಏಷ್ಯಾ ಕಪ್ ವಿಚಾರದಲ್ಲಿ ಜಯ್ ಶಾ ಮತ್ತು ಪಾಕ್ ಕ್ರಿಕೆಟ್ ಮಂಡಳಿ ಮಧ್ಯೆ ಮಾತಿನ ಜಟಾಪಟಿ ನಡೆದಿತ್ತು. ಪಾಕಿಸ್ತಾನದಲ್ಲಿ ಪಂದ್ಯಗಳು ನಡೆದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ಜಯ್ ಶಾ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪಾಕ್ ಕ್ರಿಕೆಟ್ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾರಣದಿಂದ ಈ ಟೂರ್ನಿ ನಡೆಯುವುದು ಅನುಮಾನ ಎನ್ನಲಾಗಿತ್ತು. ಅಂತಿಮವಾಗಿ ಪಾಕ್ ಬಿಸಿಸಿಐ ಎದುರು ಸೋತು ಹೈಬ್ರೀಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಒಪ್ಪಿತ್ತು. ಹೀಗಾಗಿ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕ್ನಲ್ಲಿ ಕೇವಲ ನಾಲ್ಕು ಪಂದ್ಯಗಳು ಮಾತ್ರ ನಡೆಯಲಿದೆ.
ಭಾರತಕ್ಕೆ ಅಗ್ನಿ ಪರೀಕ್ಷೆ
ಏಷ್ಯಾಕಪ್ನಲ್ಲಿ 7 ಬಾರಿಯ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ 2023ರ ನಿರ್ಣಾಯಕ ವಿಶ್ವಕಪ್ಗೆ ಮುಂಚಿತವಾಗಿ ನಡೆಯುವ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದ ಮೇಲೆ ವಿಶ್ವಕಪ್ ಭವಿಷ್ಯ ನಿರ್ಧರವಾಗಲಿದೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯೂ ಭಾರತ ತಂಡದ್ದಾಗಿದೆ. ಈ ಬಾರಿಯೂ ಗೆದ್ದರೆ ವಿಶ್ವ ಕಪ್ನಲ್ಲಿ ಭಾರತ ತಂಡದ ಮೇಲೆ ನಿರಿಕ್ಷೆಯೊಂದನ್ನು ಮಾಡಬಹುದಾಗಿದೆ.