Site icon Vistara News

Asia Cup: ಏಷ್ಯಾ ಕಪ್​ ವಿಚಾರದಲ್ಲಿ ಹೊಸ ಕ್ಯಾತೆ ತೆಗೆದ ಪಾಕಿಸ್ತಾನ​; ಟೂರ್ನಿ ನಡೆಯುವುದೇ ಅನುಮಾನ

Asia Cup

ಲಹೋರ್​: ಹಲವು ಗೊಂದಲಗಳ ಮಧ್ಯೆಯೂ ಕಳೆದ ವಾರ ಏಷ್ಯಾ ಕಪ್​ನ(Asia Cup) ದಿನಾಂಕಗಳನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಖಚಿತಪಡಿಸಿತ್ತು. ಹೈಬ್ರೀಡ್​ ಮಾದರಿಯಲ್ಲಿ ನಡೆಯುವ ಈ ಟೂರ್ನಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಒಟ್ಟು ಆರು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ನೇಪಾಳ ನಡುವೆ ಕೂಟ ನಡೆಯಲಿದೆ. ಟೂರ್ನಿಯಲ್ಲಿ 13 ಪಂದ್ಯಗಳು ನಡೆಯಲಿವೆ. ಆದರೆ ಇದೀಗ ಈ ಟೂರ್ನಿಗೆ ಮತ್ತೊಂದು ಕಂಟಕ ಎದುರಾಗಿದ್ದು ಟೂರ್ನಿ ನಡೆಯುವ ಕುರಿತು ಅನುಮಾನವೊಂದು ಮೂಡಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಝಾಕಾ ಅಶ್ರಫ್ (Zaka Ashraf) ಅವರು ಏಷ್ಯಾ ಕಪ್​ ವಿಚಾರದಲ್ಲಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಹೈಬ್ರಿಡ್ ಮಾದರಿಯನ್ನು ಮತ್ತೊಮ್ಮೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಪಾಕ್ ಕ್ರಿಕೆಟ್​ ಮಂಡಳಿಯ ಅಧ್ಯಕ್ಷರಾಗಿದ್ದ ನಜಮ್​​ ಸೇಥಿ ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿದ್ದು ಈ ಸ್ಥಾನಕ್ಕೆ ಇದೀಗ ಝಾಕಾ ಅಶ್ರಫ್ ಅವರು ಆಯ್ಕೆಯಾಗಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಮಾದ್ಯಮದ ಮುಂದೆ ಮಾತನಾಡಿರುವ ಅವರು ಏಷ್ಯಾ ಕಪ್​ ಹೈಬ್ರೀಡ್ ಮಾದರಿಯಲ್ಲಿ ನಡೆಯುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.

“ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಏಷ್ಯಾ ಕಪ್​ ಹೈಬ್ರಿಡ್ ಮಾದರಿಯು ಪಾಕಿಸ್ತಾನಕ್ಕೆ ಯಾವುದೇ ಪ್ರಯೋಜನಕಾರಿಯಲ್ಲ ಮತ್ತು ನಾನು ಇದನ್ನು ಇಷ್ಟಪಡುವುದಿಲ್ಲ. ಏಕೆಂದರೆ ಆತಿಥೇಯರಾಗಿ ಸಂಪೂರ್ಣ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ನಡೆಸಬೇಕು. ಪಾಕಿಸ್ತಾನದಲ್ಲಿ ಲೆಕ್ಕ ಭರ್ತಿಗೆ ಎಂಬಂತೆ ಕೇವಲ ನಾಲ್ಕು ಪಂದ್ಯಗಳನ್ನು ಆಡಿಸಿ ಉಳಿದ ಮಹತ್ವದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಪಾಕಿಸ್ತಾನಕ್ಕೆ ನ್ಯಾಯೋಚಿತವಲ್ಲ. ಹೀಗಾಗಿ ಮತ್ತೊಮ್ಮೆ ಪಾಕ್​ ಕ್ರಿಕೆಟ್​ ಮಂಡಳಿ ಏಷ್ಯಾ ಕಪ್​ ಬಗ್ಗೆ ಚಿಂತಿಸಲಿದೆ” ಎಂದು ಹೇಳುವ ಮೂಲಕ ಹೊಸ ಕ್ಯಾತೆ ತೆಗೆದಿದ್ದಾರೆ.

ಇದನ್ನೂ ಓದಿ Asia Cup 2023 : ಏಷ್ಯಾ ಕಪ್​ ದಿನಾಂಕ ಪ್ರಕಟ; ಪಂದ್ಯಗಳ ಪೂರ್ಣ ವಿವರ ಇಲ್ಲಿದೆ

“ಈ ಹಿಂದೆ ಯಾವ ನಿರ್ಧಾರವನ್ನು ಮಾಡಲಾಗಿದೆ ಎಂದು ನನಗೆ ತಿಳಿದಿಲ್ಲ. ಪಾಕಿಸ್ತಾನದಲ್ಲಿ ಪಂದ್ಯ ಆಡಬೇಕೆಂದು ಖಚಿತಪಡಿಸಿಕೊಳ್ಳಲು ಹಿಂದಿನ ಪಾಕ್​ ಮಂಡಳಿಯೂ ಉತ್ತಮವಾಗಿ ಮಾತುಕತೆ ನಡೆಸಬೇಕಿತ್ತು. ಸದ್ಯ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಪಂದ್ಯ ಆಡಲು ನಾನು ಯಾವುದೇ ನಿರ್ಬಂಧ ಹೇರುವುದಿಲ್ಲ. ಆದರೆ ಮತ್ತೊಂದು ಬಾರಿ ಉನ್ನತ ಮಟ್ಟದ ಸಭೆ ನಡೆಸುವುದಂತು ನಿಜ” ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದ್ದಾರೆ. ಒಂದೊಮ್ಮೆ ಪಾಕ್​ ಮತ್ತೆ ಸಂಪೂರ್ಣ ಪಂದ್ಯಗಳು ಪಾಕ್​ನಲ್ಲೇ ನಡೆಯಬೇಕು ಎಂದು ಪಟ್ಟು ಹಿಡಿದರೆ ಈ ಟೂರ್ನಿ ರದ್ದುಗೊಂಡರೂ ಅಚ್ಚರಿಯಿಲ್ಲ.

Exit mobile version