ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ರೋಜರ್ ಬಿನ್ನಿ(Roger Binny) ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ಏಷ್ಯಾಕಪ್ನ(Asia Cup 2023) ಪಂದ್ಯಕ್ಕೆ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಪಾಕಿಸ್ತಾನದ ಆಹ್ವಾನವನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ವರದಿಯಾಗಿತ್ತು. ಇದೀಗ ಅಟ್ಟಾರಿ-ವಾಘಾ ಗಡಿ(Attari-Wagah border) ಮೂಲಕ ಬಿನ್ನು ಮತ್ತು ಶುಕ್ಲಾ ಪಾಕ್ಗೆ ಹೋಗಲಿದ್ದಾರೆ ಎನ್ನಲಾಗಿದೆ.
ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ ಆಗಸ್ಟ್ 30ರಿಂದ ಆರಂಭವಾಗುವ ಏಷ್ಯಾ ಕಪ್ನ ಮೊದಲ ಪಂದ್ಯದಲ್ಲಿ ಹಾಜರಾಗುವಂತೆ ಬಿಸಿಸಿಐಗೆ ಆಹ್ವಾನವನ್ನು ನೀಡಿತ್ತು. ಇದೇ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಬಿಸಿಸಿಐ ಅಧಿಕಾರಿಯೊಬ್ಬರು, ನಮಗೆ ಪಿಸಿಬಿಯಿಂದ ಆಹ್ವಾನ ಬಂದಿರುವುದು ನಿಜ. ಆದರೆ ಈ ಸಮಯದಲ್ಲಿ, ನಾವು ಪಾಕ್ಗೆ ಭೇಟಿ ನೀಡುವ ಸಾಧ್ಯವಿಲ್ಲ. ಆಟಗಾರರಷ್ಟೇ ಅಲ್ಲ, ಅಧಿಕಾರಿಗಳು ಕೂಡ ಪಾಕಿಸ್ತಾನಕ್ಕೆ ಭೇಟಿ ನೀಡಲು ಭಾರತ ಸರ್ಕಾರದ ಅನುಮತಿಯನ್ನು ಹೊಂದಿರಬೇಕು. ನಮಗೆ ಯಾವುದೇ ಅನುಮತಿ ಸಿಕ್ಕಿಲ್ಲ. ಹೀಗಾಗಿ ನಾನು ಪಾಕ್ ಆಹ್ವಾನವನ್ನು ತಿರಸ್ಕರಿಸಿದ್ದೇವೆ’ ಎಂದು ಇನ್ಸೈಡ್ ಸ್ಪೋರ್ಟ್ಸ್ಗೆ ತಿಳಿಸಿದ್ದರು. ಆದರೆ ಈಗ ಬಂದ ಮಾಹಿತಿ ಪ್ರಕಾರ ರೋಜರ್ ಬಿನ್ನಿ ಮತ್ತು ರಾಜೀವ್ ಶುಕ್ಲಾ ಪಾಕ್ ಆಹ್ವಾನದ ಮೇರೆಗೆ ಪಂದ್ಯ ವೀಕ್ಷಣೆಗೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.
ಅಟ್ಟಾರಿ-ವಾಘಾ ಗಡಿ ಮೂಲಕ ಪ್ರಯಾಣ
ಕಳೆದ ತಿಂಗಳು ಚೆನ್ನೈಯಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ(Asian Champions Trophy hockey 2023) ಹಾಕಿ ಟೂರ್ನಿಗೆ ಪಾಕಿಸ್ತಾನ ತಂಡ(Pakistan hockey team) ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಬಂದಿದ್ದರು. ಇದೀಗ ರೋಜರ್ ಬಿನ್ನಿ ಮತ್ತು ರಾಜೀವ್ ಶುಕ್ಲಾ ಕೂಡ ಇದೇ ಮಾರ್ಗದಲ್ಲಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಪಾಕ್ ಮಾಧ್ಯಮಗಳು ಕೂಡ ಬಿಸಿಸಿಐ ಅಧಿಕಾರಿಗಳು ಏಷ್ಯಾಕಪ್ ಟೂರ್ನಿಗೆ ಪಾಕ್ಗೆ ಬರುವುದು ಖಚಿತ ಎಂದು ವರದಿ ಮಾಡಿದೆ. ‘ಏಷ್ಯಾಕಪ್ ವೇಳೆ ಬಿಸಿಸಿಐ ಪ್ರತಿನಿಧಿಯಾಗಿ ಇಬ್ಬರು ಉನ್ನತ ಅಧಿಕಾರಿಗಳು ಪಾಕಿಸ್ತಾನಕ್ಕೆ ಬರಲಿದ್ದಾರೆ. ವಾಘಾ ಬಾರ್ಡರ್ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ’ ಎಂದು ಹೇಳಿದೆ.
ಇದನ್ನೂ ಓದಿ Asia Cup 2023: ಪಾಕ್ ಕ್ರಿಕೆಟ್ ಮಂಡಳಿಯ ಆಹ್ವಾನವನ್ನು ತಿರಸ್ಕರಿಸಿದ ಬಿಸಿಸಿಐ
2004 ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಭೇಟಿಕೊಟ್ಟಿದ್ದಾಗ ತಂಡದ ಜತೆಗೆ ರಾಜೀವ್ ಶುಕ್ಲಾ ಕೂಡ ಪಾಕಿಸ್ತಾನಕ್ಕೆ ಹೋಗಿದ್ದರು. ಇದೀಗ 19 ವರ್ಷಗಳ ಬಳಿಕ ಮತ್ತೆ ಪಾಕ್ಗೆ ಶುಕ್ಲಾ ತೆರಳಲು ಸಿದ್ಧರಾಗಿದ್ದಾರೆ. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಏಷ್ಯಾ ಕಪ್ ವಿಚಾರದಲ್ಲಿ ಜಯ್ ಶಾ ಮತ್ತು ಪಾಕ್ ಕ್ರಿಕೆಟ್ ಮಂಡಳಿ ಮಧ್ಯೆ ಮಾತಿನ ಜಟಾಪಟಿ ನಡೆದಿತ್ತು. ಪಾಕಿಸ್ತಾನದಲ್ಲಿ ಪಂದ್ಯಗಳು ನಡೆದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ಜಯ್ ಶಾ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪಾಕ್ ಕ್ರಿಕೆಟ್ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾರಣದಿಂದ ಈ ಟೂರ್ನಿ ನಡೆಯುವುದು ಅನುಮಾನ ಎನ್ನಲಾಗಿತ್ತು. ಅಂತಿಮವಾಗಿ ಪಾಕ್ ಬಿಸಿಸಿಐ ಎದುರು ಸೋತು ಹೈಬ್ರೀಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಒಪ್ಪಿತ್ತು. ಹೀಗಾಗಿ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕ್ನಲ್ಲಿ ಕೇವಲ ನಾಲ್ಕು ಪಂದ್ಯಗಳು ಮಾತ್ರ ನಡೆಯಲಿದೆ.