Site icon Vistara News

Asia Cup 2023 : ಪಾಕ್ ತಂಡದ ಕ್ಯಾತೆ; ಏಷ್ಯಾಕಪ್ ವೇಳಾಪಟ್ಟಿ ಮತ್ತಷ್ಟು ವಿಳಂಬ

Asia Cup 2023

ನವ ದೆಹಲಿ: ಏಷ್ಯಾಕಪ್ 2023ರ (Asia Cup 2023) ಆಯೋಜನೆ ವಿವಾದಕ್ಕೆ ಅಂತ್ಯವಿಲ್ಲದಂತಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನೂತನ ಮುಖ್ಯಸ್ಥ ಝಾಕಾ ಅಶ್ರಫ್ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿ ಮಾಡಿ ಷರತ್ತುಗಳ ಬಗ್ಗೆ ಚರ್ಚಿಸಲಿದ್ದಾರೆ. ಏಷ್ಯಾ ಕಪ್ ಆತಿಥ್ಯದ ಹಕ್ಕನ್ನು ಶ್ರೀಲಂಕಾದೊಂದಿಗೆ ಹಂಚಿಕೊಳ್ಳುವ ಬಗ್ಗೆ ಹೊಸ ಪಿಸಿಬಿ ಮುಖ್ಯಸ್ಥರು ಮತ್ತು ಕ್ರೀಡಾ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಷ್ಯಾಕಪ್​​ನ ಸಂಪೂರ್ಣ ಆತಿಥ್ಯ ಹಕ್ಕುಗಳನ್ನು ಪಡೆಯಲು ಪಿಸಿಬಿ ವಿಶ್ವ ಕಪ್​ನಲ್ಲಿ ಭಾಗವಹಿಸುವ ವಿಚಾರವನ್ನು ಮುಂದಿಟ್ಟುಕೊಂಡು ಬೆದರಿಕೆ ಒಡ್ಡುವ ಸಾಧ್ಯತೆಗಳಿವೆ.

ವೇಳಾಪಟ್ಟಿಯನ್ನು ಈ ವಾರ ಘೋಷಿಸಬೇಕಿತ್ತು. ಆದರೆ ಈಗ ಪಿಸಿಬಿ ಏಷ್ಯಾ ಕ್ರಿಕೆಟ್ ಕೌನ್ಸಿಲ್​ ಜತೆ ಚರ್ಚೆ ನಡೆಸುವ ಬಗ್ಗೆ ಹೇಳಿಕೆ ಪ್ರಕಟಿಸಿರುವ ಕಾರಣ ವೇಳಾಪಟ್ಟಿಯ ಹಣೆಬರಹವು ಅದರ ನಂತರ ಸ್ಪಷ್ಟವಾಗಲಿದೆ. ಪಾಕಿಸ್ತಾನದ ಕ್ರೀಡಾ ಉಸ್ತುವಾರಿ ಸಚಿವ ಎಹ್ಸಾನ್ ಮಜಾರಿ ಹೈಬ್ರಿಡ್ ಮಾದರಿಯನ್ನು ನಿರಾಕರಿಸಿದ್ದೇ ಈ ಬೆಳವಣಿಗೆಗೆ ಕಾರಣ. ಪಿಸಿಬಿ ಮಾಜಿ ಅಧ್ಯಕ್ಷ ನಜಾಮ್ ಸೇಥಿ ಅವರು ಮೇ ತಿಂಗಳಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗೆ ಪ್ರಸ್ತಾಪ ಮಾಡಿದ್ದರು. ಬಳಿಕ ಅವರು ಹೈಬ್ರಿಡ್ ಮಾದರಿಗೆ ಒಪ್ಪಿಗೆ ಕೊಟ್ಟಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಮತ್ತೆ ವಿವಾದ ಸೃಷ್ಟಿಯಾಗಿದೆ.

ಪಾಕಿಸ್ತಾನವು ಆತಿಥ್ಯ ವಹಿಸಿದೆ. ಪಾಕಿಸ್ತಾನದಲ್ಲೇ ಎಲ್ಲಾ ಪಂದ್ಯಗಳನ್ನು ನಡೆಸುವ ಹಕ್ಕನ್ನು ಹೊಂದಿದೆ. ಕ್ರಿಕೆಟ್ ಪ್ರೇಮಿಗಳಿಗೆ ಬೇಕಾಗಿರುವುದು ಅದೇ. ನನಗೆ ಹೈಬ್ರಿಡ್ ಮಾದರಿ ಬೇಡ. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ, ಪಿಸಿಬಿ ನನ್ನ ಸಚಿವಾಲಯದ ಅಡಿಯಲ್ಲಿ ಬರುವುದರಿಂದ, ಭಾರತವು ತಮ್ಮ ಏಷ್ಯಾ ಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಒತ್ತಾಯಿಸಿದರೆ, ನಾವು ಭಾರತದಲ್ಲಿ ನಮ್ಮ ವಿಶ್ವ ಕಪ್ ಪಂದ್ಯಗಳಿಗೂ ಅದೇ ಬೇಡಿಕೆ ಇಡುತ್ತೇವೆ “ಎಂದು ಪಾಕಿಸ್ತಾನದ ಕ್ರೀಡಾ ಉಸ್ತುವಾರಿ ಸಚಿವ ಎಹ್ಸಾನ್ ಮಜಾರಿ ಇಂಡಿಯನ್ ಎಕ್ಸ್​ಪ್ರೆಸ್​ಗೆ ತಿಳಿಸಿದ್ದಾರೆ.

ವಾಸ್ತವದಲ್ಲಿ ಇಡೀ ಏಷ್ಯಾ ಕಪ್ ಅನ್ನು ಪಾಕಿಸ್ತಾನದಿಂದ ಹೊರಗಿಡಬೇಕೆಂದು ಬಿಸಿಸಿಐ ಬಯಸಿತ್ತು. ಆದಾಗ್ಯೂ, ನಜಾಮ್ ಸೇಥಿ ಅವರೊಂದಿಗೆ ಪದೇ ಪದೇ ಚರ್ಚಿಸಿದ ನಂತರ, ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಎಸಿಸಿ ಮುಖ್ಯಸ್ಥ ಜಯ್ ಶಾ ಇದನ್ನು ಭಾಗಶಃ ಪಾಕಿಸ್ತಾನದಲ್ಲಿ ನಡೆಸಲು ಒಪ್ಪಿಕೊಂಡಿದ್ದರು.

ಹೈಬ್ರಿಡ್ ಮಾದರಿ ಪ್ರಕಾ ಪಾಕಿಸ್ತಾನದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಅಫ್ಘಾನಿಸ್ತಾನ ವಿರುದ್ಧ ಮೊದಲ ನಾಲ್ಕು ಪಂದ್ಯಗಳು ನಡೆಯಲಿವೆ. ನಂತರದ ಎಲ್ಲಾ ತಂಡಗಳು ಶ್ರೀಲಂಕಾಕ್ಕೆ ಹಾರಲಿವೆ. ದ್ವೀಪ ರಾಷ್ಟ್ರವು ಭಾರತ ಪಂದ್ಯಗಳು ಮತ್ತು ಫೈನಲ್ ಪಂದ್ಯಗಳಲ್ಲದೆ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಟೂರ್ನಿ ಆಗಸ್ಟ್ 31ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ : Team India : ಎಮರ್ಜಿಂಗ್ ಟೀಮ್ ಏಷ್ಯಾ ಕಪ್​ಗೆ ಭಾರತ ತಂಡ ಪ್ರಕಟ; ಯಾರಿಗೆಲ್ಲ ಸಿಕ್ಕಿದೆ ಚಾನ್ಸ್?

ಕಳೆದ ವಾರ, ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್​ಸೈಡ್​ ಸ್ಪೋರ್ಟ್ಸ್​​ ಜತೆ ಮಾತನಾಡಿ, ತಾತ್ಕಾಲಿಕ ವೇಳಾಪಟ್ಟಿಯನ್ನು ಸದಸ್ಯ ಸಂಘಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ದೃಢಪಡಿಸಿದ್ದರು. ಆದರೆ ಬಿಸಿಸಿಐ ಮತ್ತು ಪಿಸಿಬಿ ಮತ್ತೆ ಐಸಿಸಿ ಮುಂದೆ ಹೋಗುವುದರಿಂದ ವೇಳಾಪಟ್ಟಿ ಯಾವಾಗ ಹೊರಬರುತ್ತದೆ ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ಆದಾಗ್ಯೂ, ಹೈಬ್ರಿಡ್ ಮಾದರಿಯ ಯೋಜನೆಗಳಲ್ಲಿ ಯಾವುದೇ ಬದಲಾವಣೆಯನ್ನು ಎಸಿಸಿ ಈಗಾಗಲೇ ತಿರಸ್ಕರಿಸಿದೆ.

ಹೈಬ್ರಿಡ್ ಯೋಜನೆಯನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಹೈಬ್ರಿಡ್ ಮಾದರಿಯನ್ನು ವಿನಂತಿಸಿದ್ದು ಪಿಸಿಬಿ ಎಂಬುದನ್ನು ಮರೆಯಬೇಡಿ. ಅವರು ಪ್ರತಿ ಹೊಸ ಅಧ್ಯಕ್ಷರೊಂದಿಗೆ ನಿಲುವನ್ನು ಬದಲಾಯಿಸಬಹುದು. ಆದರೆ ಅದು ಒಬ್ಬ ವ್ಯಕ್ತಿಯ ಇಚ್ಛೆಯಂತೆ ಕಾರ್ಯನಿರ್ವಹಿಸುವುದಿಲ್ಲ. ಲಾಜಿಸ್ಟಿಕ್ಸ್, ಪ್ರಸಾರಕರು ಮತ್ತು ಇತರ ವಿಷಯಗಳು ಇದರಲ್ಲಿ ಒಳಗೊಂಡಿವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಕಳೆದ ವಾರ ತಿಳಿಸಿದ್ದರು.

Exit mobile version