ದುಬೈ: ಬಹುನಿರೀಕ್ಷಿತ ಏಷ್ಯಾ ಕಪ್ ಟೂರ್ನಿಯ(Asia Cup 2023) ದಿನಾಂಕವನ್ನು ಈಗಾಗಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪ್ರಕಟಿಸಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿತ್ತು. ಆದರೆ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿರಲಿಲ್ಲ. ಇದೀಗ ವರದಿಯಾಗಿರುವ ಪ್ರಕಾರ ಈ ವೇಳಾಪಟ್ಟಿ(Asia Cup Schedule) ಜುಲೈ ಮೊದಲ ವಾರದಲ್ಲಿ ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ. ಭಾರತ ಮತ್ತು ಪಾಕ್ ಪಂದ್ಯ ಶ್ರೀಲಂಕಾದ ಡಂಬೂಲದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
50 ಓವರ್ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ 2023ರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ. ಡೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿದೆ. ಆರಂಭದಲ್ಲಿ ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದು, ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಪಾಕ್ನಲ್ಲಿ ನಡೆಯುವ ಪಂದ್ಯಗಳು ಲಹೋರ್ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಆದರೆ ಲಂಕಾದಲ್ಲಿ ನಡೆಯುವ ಪಂದ್ಯಗಳ ತಾಣ ಬದಲಾಗುವ ಸಾಧ್ಯತೆಯೊಂದು ಕಂಡುಬಂದಿದೆ. ಈ ಹಿಂದೆ ಕೊಲಂಬೊದಲ್ಲಿ ಪಂದ್ಯ ನಡೆಯುತ್ತದೆ ಎನ್ನಲಾಗಿತ್ತು. ಆದರೆ ಹವಾಮಾನ ಇಲಾಖೆ ಇಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಹೀಗಾಗಿ ಈ ಪಂದ್ಯಗಳು ಲಂಕಾದ ಡಂಬೂಲದಲ್ಲಿ ನಡೆಯುವ ಸಾಧ್ಯತೆ ಇದೆ.
ಇದನ್ರನೂ ಓದಿ Asia Cup 2023 : ಏಷ್ಯಾ ಕಪ್‌ನಲ್ಲೂ ಆಡುವುದಿಲ್ಲ ಅಯ್ಯರ್, ರಾಹುಲ್ ಕತೆಯೂ ಗೊತ್ತಿಲ್ಲ!
ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ರಚಿಸಿ ಎಲ್ಲ ಕ್ರಿಕೆಟ್ ಬೋರ್ಡ್ಗಳಿಗೂ ಕಳುಹಿಸಲಾಗಿದೆ. ಸಣ್ಣ ಪುಟ್ಟ ಬದಲಾವಣೆಯನ್ನು ಸರಿಪಡಿಸಿ ಈ ವಾರದಲ್ಲಿ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ. ಲೀಗ್ ಹಂತದಲ್ಲಿ ಭಾರತ ಪಾಕಿಸ್ತಾನ ಮತ್ತು ನೇಪಾಳ ಒಂದೇ ಗುಂಪಿನಲ್ಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಎರಡನೇ ಗುಂಪಿನಲ್ಲಿವೆ.
ಇನ್ನೂ ಗೊಂದಲದಲ್ಲಿದೆ ಪಾಕ್
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಝಾಕಾ ಅಶ್ರಫ್ (Zaka Ashraf) ಅವರು ಏಷ್ಯಾ ಕಪ್ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿದ್ದಾರೆ. ಹೈಬ್ರಿಡ್ ಮಾದರಿಯನ್ನು ಮತ್ತೊಮ್ಮೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ನಜಮ್ ಸೇಥಿ ಅವರ ಅಧಿಕಾರವಧಿಯಲ್ಲಿ ಹೈಬ್ರಿಡ್ ಮಾದರಿಗೆ ಒಪ್ಪಿದ್ದರು. ಆದರೆ ಅವರ ಸ್ಥಾನಕ್ಕೆ ಬಂದ ಅಶ್ರಫ್ ಉಲ್ಟಾ ಹೊಡೆದಿದ್ದಾರೆ. ಏಷ್ಯಾ ಕಪ್ ಹೈಬ್ರೀಡ್ ಮಾದರಿಯಲ್ಲಿ ನಡೆಯುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.