ದುಬೈ : ಶ್ರೀಲಂಕಾದಲ್ಲಿ ಪ್ರಸ್ತುತ ಎದುರಾಗಿರುವ ರಾಜಕೀಯ ಅಸ್ಥಿರ ಸ್ಥಿತಿ ಹಾಗೂ ಆರ್ಥಿಕ ತುರ್ತುಪರಿಸ್ಥಿತಿ ಉಂಟಾಗರುವ ಹಿನ್ನೆಲೆಯಲ್ಲಿ ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿ ಅಲ್ಲಿ ನಡೆಯುವುದು ಅನುಮಾನ ಎನಿಸಿದೆ.
ದ್ವೀಪ ರಾಷ್ಟ್ರದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ನಾಯಕರ ಪಲಾಯನ ಹಾಗೂ ಅರಾಜಕತೆ ಜನರನ್ನು ಕಂಗೆಡಿಸಿದೆ. ಇದರ ಪರಿಣಾಮವಾಗಿ ಜನರಿಗೆ ದೈನಂದಿನ ಅಗತ್ಯದ ವಸ್ತುಗಳೂ ಲಭಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ಟೂರ್ನಿ ನಡೆಸಲು ಸಾಧ್ಯವೇ ಇಲ್ಲ ಎಂಬುದನ್ನು ಅರಿತಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಬೇರೆ ಕಡೆಗೆ ಸ್ಥಳಾಂತರ ಮಾಡಲು ಮುಂದಾಗಿದೆ. ಅದಕ್ಕೆ ಸೂಕ್ತ ಜಾಗ ಯುಎಇ.
ಇದನ್ನೂ ಓದಿ |ಆಗಸ್ಟ್ 28ರಂದು Indo-Pak ಹಣಾಹಣಿ
ಏಷ್ಯಾ ಕಪ್- 2022 ಗೆ ಶ್ರೀಲಂಕಾಗೆ ಆತಿಥ್ಯ ಸಿಕ್ಕಿತು. ಅದಾಗಲೇ ಆರ್ಥಿಕ ತುರ್ತುಪರಿಸ್ಥಿತಿ ಎದುರಾದ ಕಾರಣ ಮತ್ತೊಂದು ಬಾರಿ ಸಭೆ ನಡೆಸಲಾಗಿತ್ತು. ಅಂತಿಮವಾಗಿ ಶ್ರೀಲಂಕಾದಲ್ಲೇ ನಡೆಸಲು ಸಿದ್ಧತೆ ನಡೆಸಲಾಯಿತು. ಆದರೆ, ಪರಿಸ್ಥಿತಿ ಇದೀಗ ಇನ್ನಷ್ಟು ಹದಗೆಟ್ಟಿದ್ದು, 16 ದಿನಗಳ ಸುದೀರ್ಘ ಪಂದ್ಯಾವಳಿಯನ್ನು ಯುಎಇಯಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ತಿಳಿಸಿದ್ದಾರೆ. ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಪ್ರಸ್ತಾಪವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದಿಟ್ಟಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶ್ರೀಲಂಕಾದ ಬೆಂಬಲಕ್ಕೆ ನಿಂತಿದೆ. ಹೀಗಾಗಿ ಹೀಗಾಗಿ ಆಗಸ್ಟ್ವರೆಗೂ ಕಾದು ನೋಡುವ ತಂತ್ರಕ್ಕೆ ಲಂಕಾ ಕ್ರಿಕೆಟ್ ಮಂಡಳಿ ಮುಂದಾಗಲಿದೆ. ಆ ವೇಳೆಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಯುಎಇನಲ್ಲಿ ಏಷ್ಯಾಕಪ್ ನಡೆಯಲಿದೆ ಎಂದು ತಿಳಿದು ಬಂದಿದೆ.
ಆಗಸ್ಟ್ 26 ರಿಂದ ಏಷ್ಯಾಕಪ್ ಟಿ20 ಟೂರ್ನಿ ಶುರುವಾಗಲಿದ್ದು, ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಆ ಬಳಿಕ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ನ ನಡೆಯಲಿದೆ. ಎರಡೂ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಸೆಣಸಾಡಲಿವೆ.
ಈ ಬಾರಿ ಏಷ್ಯಾ ಕಪ್ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ 5 ತಂಡಗಳು ಅರ್ಹತೆ ಪಡೆದುಕೊಂಡಿದೆ.
ಯಾವುದೆಲ್ಲ ತಂಡಗಳು?
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದಿವೆ. ಆರನೇ ತಂಡವನ್ನು ಅರ್ಹತಾ ಸುತ್ತಿನಲ್ಲಿ ನಿರ್ಧರಿಸಲಾಗುತ್ತದೆ. ಹಾಂಕಾಂಗ್, ಕುವೈತ್, ಸಿಂಗಾಪುರ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿಗೆ ಪ್ರವೇಶಿಸಿವೆ. ಹೀಗಾಗಿ ಈ ತಂಡಗಳಲ್ಲಿ ಒಂದು ಪ್ರವೇಶ ಗಿಟ್ಟಿಸಲಿದೆ.
15ನೇ ಆವೃತ್ತಿ
ಇದು 15ನೇ ಆವೃತ್ತಿಯ ಏಷ್ಯಾ ಕಪ್. 1984 ರಲ್ಲಿ ಯುಎಇನಲ್ಲಿ ಏಷ್ಯಾಕಪ್ ಆರಂಭವಾಗಿತ್ತು. ಇದೀಗ ಯುಎಇಗೆ ಮತ್ತೆ ಆತಿಥ್ಯ ದೊರೆಯುವ ಸಾಧ್ಯತೆಗಳಿವೆ. ಕಳೆದ ವರ್ಷ ಕೊರೋನಾ ಕಾರಣದಿಂದ ಏಷ್ಯಾ ಕಪ್ ನಡೆದಿರಲಿಲ್ಲ.
ಇದನ್ನೂ ಓದಿ | Afro Asia Cup | ವಿರಾಟ್ ಹಾಗೂ ಬಾಬರ್ ಒಂದೇ ತಂಡಕ್ಕೆ ಆಡ್ತಾರಾ?