ಕರಾಚಿ: ಏಷ್ಯಾ ಕಪ್(Asia Cup) ಟೂರ್ನಿ ಆಡಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಬಿಸಿಸಿಐ(BCCI) ಕಳುಹಿಸದಿದ್ದರೆ ಭಾರತದಲ್ಲಿ ನಡೆಯುವ 2023ರ ಏಕ ದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾಗವಹಿಸುವುದಿಲ್ಲ ಎಂದು ಪಿಸಿಬಿ(PCB) ಅಧ್ಯಕ್ಷ ನಜಮ್ ಸೇಥಿ(Najam Sethi) ಹೇಳಿದ್ದಾರೆ.
“ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ಎಲ್ಲ ತಂಡಗಳು ಪಾಕಿಸ್ತಾನಕ್ಕೆ ಆಗಮಿಸುತ್ತಿವೆ ಹಾಗೂ ಇಲ್ಲಿ ಯಾವುದೇ ಭದ್ರತೆಯ ಸಮಸ್ಯೆ ಇಲ್ಲ. ಹಾಗಾಗಿ ನಮ್ಮ ಎಲ್ಲ ಆಯ್ಕೆಗಳು ಮುಕ್ತವಾಗಿವೆ. ಆದರೆ ಭಾರತ ಮಾತ್ರ ಏಕೆ ಭದ್ರತೆ ಬಗ್ಗೆ ಚಿಂತೆ ಮಾಡುತ್ತಿದೆ? ಅದೇ ರೀತಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ನಮ್ಮ ತಂಡವನ್ನು ಕಳುಹಿಸುವ ಬಗ್ಗೆ ನಾವು ಕೂಡ ಭದ್ರತೆಯ ಅಂಶಗಳನ್ನು ಪರಿಗಣಿಸುತ್ತೇವೆ. ಒಂದೊಮ್ಮೆ ಏಷ್ಯಾಕಪ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬಾರದೇ ಹೋದರೆ ನಾವು ಕೂಡ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್ಗೆ ಬರುವುದಿಲ್ಲ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಅಸಾಧ್ಯ ಎಂದು ಸೇಥಿ ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ Asia Cup 2023 : ನಮಗೂ ಮರ್ಯಾದೆ ಉಂಟು, ನಾವು ಭಾರತಕ್ಕೆ ಹೋಗುವುದಿಲ್ಲ ಎಂದ ಪಾಕ್ ಮಾಜಿ ಕ್ರಿಕೆಟಿಗ
“ಬಿಸಿಸಿಐ ನಿಲುವನ್ನು ನಾವು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲೇ ನಡೆಯಲಿದೆ. ಇದರ ಜತೆಗೆ ಮುಂದಿನ 2025ರ ವಿಶ್ವ ಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳು ಕೂಡ ಪಾಕಿಸ್ತಾನದಲ್ಲಿ ನಡೆಯಲಿದೆ. ಇದನ್ನು ತಪ್ಪಿಸುವ ಅಧಿಕಾರ ಬಿಸಿಸಿಐಗೆ ಇಲ್ಲ. ಒಂದೊಮ್ಮೆ ಬಿಸಿಸಿಐ ತನ್ನ ಪ್ರಾಬಲ್ಯದ ಮೂಲಕ ಈ ಆತಿಥ್ಯವನ್ನು ತಪ್ಪಿಸಿದರೆ ಭಾರತ ಆತಿಥ್ಯದಲ್ಲಿ ನಡೆಯುವ ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನವೂ ಪಾಲ್ಗೊಳ್ಳುವುದಿಲ್ಲ” ಎಂದು ಸೇಥಿ ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸಭೆಗಳಲ್ಲಿ ಈ ವಿಚಾರವಾಗಿ ಚರ್ಚಿಸಿ ಮುಂದಿನ ನಿರ್ಧಾರವನ್ನು ಪ್ರಕಟಿಸುತ್ತೇವೆ. ಆದರೆ ಟೂರ್ನಿ ಮಾತ್ರ ಪಾಕಿಸ್ತಾನದಲ್ಲೇ ನಡೆಯಲಿದೆ ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಭೆಗೂ ಮುನ್ನವೇ ಸೇಥಿ ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ.