ಮುಂಬಯಿ: ಏಷ್ಯಾ ಕಪ್ 2023 (Asia Cup 2023) ಆತಿಥ್ಯವೇ ಕ್ರಿಕೆಟ್ ಕ್ಷೇತ್ರದ ಬಹುಚರ್ಚಿತ ವಿಷಯವಾಗಿದೆ. ಭಾರತ ತಂಡ ನಾವು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುವುದಕ್ಕೆ ಸಿದ್ಧವಿಲ್ಲ ಎಂದು ಹೇಳುವ ಮೂಲಕ ವಿವಾದ ಶುರವಾಗಿತ್ತು. ಇದೀಗ ವಾದ ವಿವಾದಗಳ ಸರಣಿಯ ಬಳಿಕ ಟೂರ್ನಿಯನ್ನೇ ಶ್ರೀಲಂಕಾಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮನವಿಯನ್ನು ಪುರಸ್ಕರಿಸಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ದ್ವೀಪ ರಾಷ್ಟ್ರ ಲಂಕೆಯಲ್ಲಿ ನಡೆಸಲು ಮುಂದಾಗಿದೆ ಎನ್ನಲಾಗಿದೆ.
ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬಹುದು ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾದವನ್ನೂ ಭಾರತ ತಿರಸ್ಕರಿತ್ತು. ಭಾರತ ತಂಡದ ಪಂದ್ಯಗಳನ್ನು ಮಾತ್ರ ತಟಸ್ಥ ತಾಣದಲ್ಲಿ ಆಯೋಜಿಸುವ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು. ಜತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಮ್ಮಲ್ಲೇ ನಡೆಯಬೇಕು ಎಂದು ವಾದ ಮಂಡಿಸುವುದನ್ನು ಮುಂದುವರಿಸಿತು. ಹೀಗಾಗಿ ಸಮರ್ಥನೀಯ ಪರಿಹಾರ ಸಿಗದೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲು ಮುಂದಾಗಿದೆ ಎನ್ನಲಾಗಿದೆ. ಅದಕ್ಕಾಗಿ ಶ್ರೀಲಂಕಾವನ್ನು ಆಯ್ಕೆ ಮಾಡಿಕೊಂಡಿದೆ ಎಂಬುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಶ್ರೀಲಂಕಾ ಈಗ ಏಷ್ಯಾ ಕಪ್ 2023 ರ ಆತಿಥ್ಯ ವಹಿಸಲು ಉತ್ಸುಕವಾಗಿದೆ. ಮೇ ಅಂತ್ಯದ ವೇಳೆಗೆ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಬಹುದು. ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾವೂ ಬೆಂಬಲ ನೀಡಿರುವ ಕಾರಣ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಕಠಿಣ ನಿರ್ಧಾರ ಕೈಗೊಳ್ಳಲಿದೆ. ಈ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆ.
ಆದಾಗ್ಯೂ, ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆಯು ಸದ್ಯಕ್ಕೆ ಅಸ್ಪಷ್ಟ. ಪಾಕಿಸ್ತಾನದ ಆತಿಥ್ಯ ಹಕ್ಕು ಕಸಿದುಕೊಂಡರೆ ಅವರು ಟೂರ್ನಿಯನ್ನು ಬಹಿಷ್ಕರಿಸಬಹುದು ಎಂದು ವರದಿಗಳು ತಿಳಿಸಿವೆ.
ಏಷ್ಯಾ ಕಪ್ ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭವಾಗಲಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಸಂಭಾವ್ಯ ಆತಿಥ್ಯ ವಹಿಸುವ ಬಗ್ಗೆ ಚರ್ಚಿಸಲಾಗಿತ್ತು. 2018ರಲ್ಲಿ ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ಆಟಗಾರರು ಅಲ್ಲಿನ ವಾತಾವರಣಕ್ಕೆ ಒಗ್ಗದೇ ಸಂಕಷ್ಟ ಎದುರಿಸಿದ್ದರು. ಹೀಗಾಗಿ ಶ್ರೀಲಂಕ ಉತ್ತಮ ತಾಣ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : Asia Cup 2023 : ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಬೇಡ ಎಂಬ ಬಿಸಿಸಿಐ ವಾದಕ್ಕೆ ಲಂಕಾ, ಬಾಂಗ್ಲಾ ಬೆಂಬಲ
ಏಷ್ಯಾ ಕಪ್ ಮುಗಿದ ಕೂಡಲೇ ಭಾರತದಲ್ಲಿ ಏಕದಿನ ವಿಶ್ವ ಕಪ್ ನಡೆಯಲಿದ್ದು, ಎಲ್ಲ ಕ್ರಿಕೆಟ್ ದೇಶಗಳು ಈ ಪ್ರವಾಸಕ್ಕೆ ಸಜ್ಜಾಗುತ್ತಿವೆ. ಒಂದು ವೇಳೆ ಆತಿಥ್ಯ ಹಕ್ಕು ಪಾಕಿಸ್ತಾನದಿಂದ ತಪ್ಪಿದರೆ ಆ ತಂಡ ವಿಶ್ವ ಕಪ್ಗಾಗಿ ಭಾರತಕ್ಕೆ ಆಗಮಿಸುವುದು ಕೂಡ ಅನುಮಾನ ಎನಿಸಿದೆ. ಒಂದು ವೇಳೆ ಅವರು ಸದ್ಯಕ್ಕೆ ಹಾಕುತ್ತಿರುವ ಬೆದರಿಕೆಯಂತೆ ನಡೆದರೆ ಭಾಗವಹಿಸುವಿಕೆ ಬಹುತೇಕ ಇಲ್ಲ.
ಮುಂಬರುವ ವಾರಗಳಲ್ಲಿ ಟೂರ್ನಿಯಅಧಿಕೃತ ಆತಿಥ್ಯವನ್ನು ಘೋಷಿಸಲು ಎಸಿಸಿ ಎದುರು ನೋಡುತ್ತಿದೆ. ಹೀಗಾಗಿ ಪಾಕಿಸ್ತಾನ ತನ್ನ ಹಠಮಾರಿತನ ಮುಂದುವರಿಸಿದರೆ ಆತಿಥ್ಯ ನಷ್ಟ ಖಾತರಿ.