ಬೆಂಗಳೂರು: ಮುಂದಿನ ತಿಂಗಳು ಚೀನಾದ ಹ್ಯಾಂಗ್ಝೂನಲ್ಲಿ(Hangzhou, China) ಆರಂಭಗೊಳ್ಳಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್(Asian Games)ಗೆ ನಡೆಸುವ ರಾಷ್ಟ್ರೀಯ ಶಿಬಿರದಿಂದ ಹಿರಿಯ ಫಾರ್ವರ್ಡ್ ಆಟಗಾರ್ತಿ ರಾಣಿ ರಾಂಪಾಲ್(Rani Rampal) ಅವರನ್ನು ಕೈಬಿಡಲಾಗಿದೆ. 34 ಸದಸ್ಯೆಯರನ್ನು ಒಳಗೊಂಡ ಮಹಿಳಾ ಹಾಕಿ ಸಂಭಾವ್ಯ ತಂಡದಿಂದ ಹೊರಗಿಟ್ಟ ಕಾರಣಕ್ಕೆ ರಾಷ್ಟ್ರೀಯ ಕೋಚ್ ವಿರುದ್ಧ ರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಚ್ಗೆ ಪಶ್ನೆ
“ತಾನು ಫಿಟ್ನೆಸ್ ಹೊಂದಿದ್ದೇನೆ, ಜತೆಗೆ ತಂಡದ ಪರ ಉತ್ತಮ ಪ್ರದರ್ಶನವನ್ನೂ ನೀಡಿದ್ದೇನೆ, ಹೀಗಿರುವಾಗ ತನ್ನನ್ನು ಏಕೆ ಈ ಶಿಬಿರದಿಂದ ದೂರ ಇಡಲಾಗಿದೆ ಎಂದು ತಿಳಿದುಕೊಳ್ಳಲು ಬಯಸಿದ್ದೇನೆ. ಇದಕ್ಕೆ ಸೂಕ್ತ ಉತ್ತವರನ್ನು ರಾಷ್ಟ್ರೀಯ ಮುಖ್ಯ ಕೋಚ್ ಜನ್ನೆಕ್ ಶಾಪ್ಮನ್ ನೀಡಬೇಕು” ಎಂದು ರಾಣಿ ಅವರು ಕೋಚ್ಗೆ ಪ್ರಶ್ನೆ ಮಾಡಿದ್ದಾರೆ. ಈ ಶಿಬಿರ ಇಂದು(ಭಾನುವಾರ) ಆರಂಭಗೊಂಡಿದ್ದು ಸೆಪ್ಟಂಬರ್ 18ರಂದು ಮುಕ್ತಾಯವಾಗಲಿದೆ.
‘ಎ’ ಗುಂಪಿನಲ್ಲಿ ಕೊರಿಯಾ, ಮಲೇಷ್ಯಾ, ಹಾಂಕಾಂಗ್, ಚೀನಾ ಹಾಗೂ ಸಿಂಗಾಪುರ ತಂಡಗಳೊಂದಿಗೆ ಭಾರತ ಸ್ಥಾನ ಪಡೆದಿದಿದ್ದು, ಸೆಪ್ಟಂಬರ್ 27ರಂದು ತನ್ನ ಅಭಿಯಾನ ಆರಂಭಿಸಲಿದೆ. ಭಾರತದ ಮಹಿಳಾ ತಂಡ ಕಳೆದ ತಿಂಗಳು ಬಾರ್ಸಿಲೋನದಲ್ಲಿ 100ನೇ ವರ್ಷದ ಸ್ಪ್ಯಾನಿಶ್ ಹಾಕಿ ಟೂರ್ನಿಯನ್ನು ಜಯಿಸಿತ್ತು.
ಒಲಿಂಪಿಕ್ಸ್ ಬಳಿಕ ಆಡಿಲ್ಲ
ಟೊಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರಾಣಿ ರಾಂಪಾಲ್ ತಂಡವನ್ನು ನಾಲ್ಕನೇ ಸ್ಥಾನಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಒಲಿಂಪಿಕ್ಸ್ ಬಳಿಕ ಗಾಯದ ಸಮಸ್ಯೆಯಿಂದ ರಾಣಿ ಇದುವರೆಗೆ ನಡೆದ ಯಾವುದೇ ಹಾಕಿ ಟೂರ್ನಿಯಲ್ಲೂ ಪಾಲ್ಗೊಂಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಅನುಭವಿ ಗೋಲ್ ಕೀಪರ್ ಸವಿತಾ ಪೂನಿಯ ಎಲ್ಲ ಟೂರ್ನಿಯಲ್ಲೂ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂದಿನ ವರ್ಷ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಇದ್ದು ಇದರಲ್ಲಿಯೂ ಅವರು ಆಡುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಅವರು ಆಡದಿದ್ದರೆ ಸವಿತಾ ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆ ಅಧಿಕವಾಗಿದೆ.
ಇದನ್ನೂ ಓದಿ Asian Champions: 4ನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡಕ್ಕೆ ಭರ್ಜರಿ ನಗದು ಬಹುಮಾನ ಘೋಷಿಸಿದ ಸಿಎಂ ಸ್ಟಾಲಿನ್
ಯುವಕರು ಹಾಕಿ ಕ್ರೀಡೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಹಾಕಿ ಇಂಡಿಯಾ ದಿಟ್ಟ ಹೆಜ್ಜೆ ಇಟ್ಟಿದೆ. ಬಾಲಕ-ಬಾಲಕಿಯರಿಗಾಗಿ ಸಬ್ ಜೂನಿಯರ್ (ಅಂಡರ್-17) ರಾಷ್ಟ್ರೀಯ ಹಾಕಿ ತಂಡಗಳನ್ನು ರಚಿಸುವುದಾಗಿ ಹಾಕಿ ಇಂಡಿಯಾ ಪ್ರಕಟಿಸಿದೆಯಲ್ಲದೇ ಈ ತಂಡಗಳಿಗೆ ಮಾಜಿ ನಾಯಕರಾದ ಸರ್ದಾರ್ ಸಿಂಗ್ ಮತ್ತು ರಾಣಿ ರಾಂಪಾಲ್ ಅವರನ್ನು ಕೋಚ್‌ಗಳಾಗಿ ನೇಮಿಸಿದೆ
ಸಂಭಾವ್ಯ ತಂಡ
ಗೋಲ್ ಕೀಪರ್: ಸವಿತಾ ಪೂನಿಯ, ರಜನಿ ಎಟಿಮುರ್ಪು, ಬಿಚು ದೇವಿ, ಬನ್ಸಾರಿ ಸೋಲಂಕಿ.
ಡಿಫೆಂಡರ್: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಅಕ್ಷತಾ, ಜ್ಯೋತಿ ಚತ್ರಿ, ಮಹಿಮಾ ಚೌಧರಿ.
ಮಿಡ್ ಫೀಲ್ಡರ್: ನಿಶಾ, ಸಲಿಮಾ ಟೇಟೆ, ಸುಶೀಲಾ ಚಾನು, ಜ್ಯೋತಿ, ನವಜೋತ್ ಕೌರ್, ಮೋನಿಕಾ, ಮರಿಯನಾ ಕುಜುರ್, ಸೋನಿಕಾ, ನೇಹಾ, ಬಲ್ಜೀತ್ ಕೌರ್, ರೀನಾ ಖೋಕರ್, ವೈಷ್ಣವಿ ವಿಠಲ್ ಫಾಲ್ಕೆ, ಅಜ್ಮಿನಾ ಕುಜುರ್.
ಫಾರ್ವರ್ಡ್: ಲಾಲ್ರೆಂಸಿಯಾಮಿ, ನವನೀತ್ ಕೌರ್, ವಂದನಾ ಕಟಾರಿಯಾ, ಶರ್ಮಿಳಾ ದೇವಿ, ದೀಪಿಕಾ, ಸಂಗೀತಾ ಕುಮಾರಿ, ಮುಮ್ತಾಝ್ ಖಾನ್, ಸುನೀತಾ ಟೊಪ್ಪೊ, ಬ್ಯೂಟಿ ಡಂಗ್ಡಂಗ್