ಚೆನ್ನೈ: ಗುರುವಾರ ಆರಂಭವಾದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ(Mens Asian Champions Trophy) ಆತಿಥೇಯ ಭಾರತ ತಂಡ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಚೀನಾ(India vs China) ವಿರುದ್ಧ 7-2 ಗೋಲ್ಗಳ ಅಂತರದಿಂದ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಬಲಿಷ್ಠ ಜಪಾನ್ ಸವಾಲು ಎದುರಿಸಲಿದೆ.
ಚೆನ್ನೈಯ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ (2), ವರುಣ್ ಕುಮಾರ್ (3), ಅಕ್ಷದೀಪ್ ಸಿಂಗ್ ಮತ್ತು ಮನ್‌ದೀಪ್ ಸಿಂಗ್ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಆಡವಾಡಿದ ಭಾರತಕ್ಕೆ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಂದ್ಯ ಆರಂಭಗೊಂಡ 5ದೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಇಷ್ಟಕ್ಕೆ ತೃಪ್ತಿ ಪಟದ ಹರ್ಮನ್‌ಪ್ರೀತ್ 8ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಮಿಂಚಿದರು. ಇದರ ಬಳಿಕ ವರುಣ್ ಕುಮಾರ್ ಮತ್ತು ಮನ್‌ದೀಪ್ ಸಿಂಗ್ ಬೆನ್ನು ಬೆನ್ನಿಗೆ ಗೋಲು ಬಾರಿಸಿ ಚೀನಾಕ್ಕೆ ಒತ್ತಡ ಹೇರಿದರು. ಚೀನಾ ಪರ ವೆನ್ ಹುಯಿ ಮತ್ತು ಜೀಷೆಂಗ್ ಗಾವೊ ತಲಾ ಒಂದೊಂದು ಗೋಲ್ ಬಾರಿಸಿದರು.
ಇದನ್ನೂ ಓದಿ Asian Champions hockey: ಅಟ್ಟಾರಿ-ವಾಘಾ ಗಡಿ ದಾಟಿ ಬಂದ ಪಾಕ್ ಹಾಕಿ ಆಟಗಾರರು
A spectacular start to the campaign for the #MenInBlue as they dismantled China in some style.#HockeyIndia #IndiaKaGame #HACT2023 pic.twitter.com/TK6QdjHXk7
— Hockey India (@TheHockeyIndia) August 3, 2023
ಜಪಾನ್ಗೆ ಸೋಲಿನ ಶಾಕ್
ಕಳೆದ ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. 2-1 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. 6ನೇ ನಿಮಿಷದಲ್ಲೇ ಜಪಾನ್ ಗೋಲಿನ ಖಾತೆ ತೆರೆದರೂ ಅಂತಿಮ ಹಂತದಲ್ಲಿ ಎಡವಿ ಸೋಲು ಕಂಡಿತು.
ಸೋಲು ಕಂಡ ಪಾಕಿಸ್ತಾನ
ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ತಂಡ ಮಲೇಷ್ಯಾ ವಿರುದ್ಧ 3-1 ಗೋಲುಗಳಿಂದ ಸೋಲು ಕಂಡಿದೆ. ಮಲೇಷ್ಯಾ ಪರ ಅಶಾರಿ 28 ಮತ್ತು 29ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿದರೆ, ಶೆಲ್ಲೊ ಸಿಲ್ವೇರಿಯಸ್ 44ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಾಕ್ ಪರ ಅಬ್ದುಲ್ ರೆಹಮಾನ್ 55ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.