Site icon Vistara News

Asian Champions Trophy: ಭಾರತ ವಿರುದ್ಧ ಪಾಕ್​ಗೆ ಹೀನಾಯ ಸೋಲು

Skipper Harmanpreet Singh scored twice as India defeated arch-rivals Pakistan

ಚೆನ್ನೈ: ಈಗಾಗಲೇ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ(Asian Champions Trophy Hockey) ಪಂದ್ಯಾವಳಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿರುವ ಭಾರತ ತಂಡ ಬುಧವಾರ ರಾತ್ರಿ ನಡೆದ ಅಂತಿಮ ಲೀಗ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-0 ಗೋಲ್​ಗಳಿಂದ ಬಗ್ಗುಬಡಿದಿದೆ.(India defeated Pakistan)  ಈ ಮೂಲಕ ಅಜೇಯ ಓಟವನ್ನು ಕಾಯ್ದುಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು. ಸೋಲು ಕಂಡ ಪಾಕಿಸ್ತಾನ ಕೂಟದಿಂದ ಹೊರಬಿದ್ದಿದೆ.

ಹರ್ಮನ್​ಪ್ರೀತ್​ ನಾಯಕನ ಆಟ

ಭಾರತಕ್ಕೆ ತಂಡದ ನಾಯಕ ಹರ್ಮನ್​ಪ್ರೀತ್​ ಸಿಂಗ್(Harmanpreet Singh)​ ಅವರು ಅವಳಿ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಗೋಲ್​ 15ನೇ ನಿಮಿಷ ಮತ್ತು ದ್ವಿತೀಯ ಗೋಲನ್ನು 23ನೇ ನಿಮಿಷದಲ್ಲಿ ಬಾರಿಸಿದರು. ಎರಡೂ ಗೋಲುಗಳನ್ನು ಪೆನಾಲ್ಟಿ ಕಾರ್ನರ್‌ ಮೂಲಕ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ಸು ಕಂಡರು. ಉಳಿದ ಎರಡು ಗೋಲ್​ಗಳನ್ನು ಯುವ ಡ್ರ್ಯಾಗ್‌ ಫ್ಲಿಕರ್‌ ಜುಗ್ರಾಜ್‌ ಸಿಂಗ್‌(36ನೇ ನಿಮಿಷ) ಮತ್ತು ಆಕಾಶ್​ ದೀಪ್​ ಸಿಂಗ್​(55ನೇ ನಿಮಿಷದಲ್ಲಿ) ಬಾರಿಸಿದರು.

ಭಾರತವೇ ಫೇವರಿಟ್‌

ಭಾರತ ಈ ಟೂರ್ನಿಯಲ್ಲಿ ಇದುವರೆಗೆ ಮೂರು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿವೆ. ಈ ಬಾರಿಯೂ ಭಾರತವೇ ಟೂರ್ನಿಯ ಫೇವರಿಟ್​ ಆಗಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿರುವುದು. ಈ ಕೂಟದಲ್ಲಿ ಆಕ್ರಮಣಕಾರಿ ಆಟವಾಡುತ್ತಲೇ ಬಂದಿದೆ. ಜತೆಗೆ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿಸುವ ಪ್ರಯತ್ನಿಸುವಲ್ಲಿ ಎಡವುತ್ತಿದ್ದ ಹರ್ಮನ್‌ಪ್ರೀತ್‌ ಸಿಂಗ್‌ ಪಡೆ ಪಾಕ್​ ವಿರುದ್ಧದ ಪಂದ್ಯದಲ್ಲಿ ಇದನ್ನು ಸರಿಪಡಿಸಿಕೊಂಡು ಒಟ್ಟು ಪೆನಾಲ್ಟಿ ಕಾರ್ನರ್‌ ಮೂಲಕ ಮೂರು ಗೋಲ್​ ಬಾರಿಸುವಲ್ಲಿ ಯಶಸ್ಸು ಕಂಡಿದೆ. ಹೀಗಾಗಿ ಈ ವಿಭಾಗದಲ್ಲಿಯೂ ಸುಧಾರಣೆ ಕಂಡಿರುವುದು ಸಂತಸದ ವಿಚಾರ.

ಇದನ್ನೂ ಓದಿ ಏಷ್ಯನ್​ ಹಾಕಿ; ಕೊರಿಯಾವನ್ನು ಮಣಿಸಿ ಸೆಮಿಗೆ ಲಗ್ಗೆಯಿಟ್ಟ ಭಾರತ

ಆರ್​.ಅಶ್ವಿನ್​ ಮತ್ತು ಸಿಎಂ ಸ್ಟಾಲಿನ್​ ಹಾಜರ್​

ಈ ಪಂದ್ಯಕ್ಕೆ ಟೀಮ್​ ಇಂಡಿಯಾದ ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​(Ravichandran Ashwin ) ಮತ್ತು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್(Tamil Nadu Chief Minister MK Stalin )​ ಕೂಡ ಸಾಕ್ಷಿಯಾದರು. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಆಟಗಾರರಿಗೆ ಮೈದಾನಕ್ಕೆ ಬಂದು ಶುಭ ಹಾರೈಸಿದರು.

ಭಾರತ ಬಲಿಷ್ಠ ರಕ್ಷಣಾ ಕೋಟೆ

ಭಾರತದ ಈ ಪಂದ್ಯಕ್ಕೆ ಬಲಿಷ್ಠ ಚಕ್ರವ್ಯೂಹವನ್ನೇ ನಿರ್ಮಿಸಿತು. ಪಂದ್ಯ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಪಾಕ್​ಗೆ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಬಾರಿಸುವ ಸುವರ್ಣ ಅವಕಾಶ ಲಭಿಸಿತು. ಆದರೆ ಇದನ್ನು ಕೃಷ್ಣ ಬಹದ್ದೂರ್‌ ಪಾಠಕ್‌​ ತಡೆಯುವಲ್ಲಿ ಯಶಸ್ವಿಯಾದರು. ಹೀಗೆ ಹಲವು ಗೋಲು ಬಾರಿಸುವ ಅವಕಾಶ ಲಭಿಸಿದರೂ ಭಾರತದ ಬಲಿಷ್ಠ ರಕ್ಷಣಾ ಕೋಟೆಯ ಮುಂದೆ ಪಾಕ್​ ಆಡ ನಡೆಯಲೇ ಇಲ್ಲ. ಕನಿಷ್ಠ ಪಕ್ಷ ಒಂದು ಗೋಲು ಕೂಡ ಬಾರಿಸಲಾಗದೆ ಹೀನಾಯ ಸೋಲು ಕಂಡರು. ಇನ್ನು ಉಭಯ ತಂಡಗಳು ಏಷ್ಯನ್​ ಗೇಮ್ಸ್​ನಲ್ಲಿ ಮುಖಾಮುಖಿಯಾಗಲಿವೆ.

ಸೆಮಿಯಲ್ಲಿ ಜಪಾನ್​ ಎದುರಾಳಿ

ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಜಪಾನ್​ ಸವಾಲು ಎದುರಿಸಿದರೆ, ಮತ್ತೊಂದು ಸೆಮಿಫೈನಲ್​ನಲ್ಲಿ ಮಲೇಷ್ಯಾ ಮತ್ತು ಕೊರಿಯಾ ತಂಡಗಳು ಸೆಣಸಾಟ ನಡೆಸಲಿವೆ. ಈ ಎರಡು ಪಂದ್ಯಗಳು ಶುಕ್ರವಾರ ನಡೆಯಲಿದೆ. ಭಾರತ ಲೀಗ್​ನಲ್ಲಿ ಜಪಾನ್​ ವಿರುದ್ಧ 1-1 ಗೋಲ್​ಗಳಿಂದ ಡ್ರಾ ಮಾಡಿಕೊಂಡಿತ್ತು. ಹೀಗಾಗಿ ಸೆಮಿಫೈನಲ್​ನಲ್ಲಿಯೂ ಪ್ರಬಲ ಪೈಪೋಟಿ ಏರ್ಪಡುವ ನಿರೀಕ್ಷೆಯೊಂದನ್ನು ಮಾಡಬಹುದು.

ಭಾರತ ತಂಡ

ಮಿಡ್‌ಫೀಲ್ಡರ್‌ಗಳು: ಹರ್ಮನ್​ಪ್ರೀತ್​ ಸಿಂಗ್​(ನಾಯಕ), ಹಾರ್ದಿಕ್ ಸಿಂಗ್ (ಉಪನಾಯಕ), ಜರ್ಮನ್‌ಪ್ರೀತ್ ಸಿಂಗ್, ಸುಮಿತ್, ಜುಗರಾಜ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್. ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ ಮತ್ತು ಶಂಶೇರ್ ಸಿಂಗ್. ಫಾರ್ವರ್ಡ್‌ಗಳು: ಆಕಾಶದೀಪ್ ಸಿಂಗ್, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್, ಸುಖಜೀತ್ ಸಿಂಗ್, ಎಸ್ ಕಾರ್ತಿ. ಗೋಲ್​ ಕೀಪರ್​: ಪಿ.ಆರ್​ ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್.

Exit mobile version