Site icon Vistara News

Asian Cup Table Tennis | ಐತಿಹಾಸಿಕ ಪದಕ ಗೆದ್ದ ಮಣಿಕಾ ಬಾತ್ರಾ; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ

Asian Cup Table Tennis

ಬ್ಯಾಂಕಾಕ್​: ಟೇಬಲ್ ಟೆನಿಸ್​ ಪಟು ಮಣಿಕಾ ಬಾತ್ರಾ ಅವರು ಏಷ್ಯಾ ಕಪ್‌ ಟೇಬಲ್ ಟೆನಿಸ್(Asian Cup Table Tennis) ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಸಾಧನೆ ಮೆರೆದಿದ್ದಾರೆ. ಶನಿವಾರ ಇಲ್ಲಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಈ ಶ್ರೇಯ ಪಡೆದರು. ಶರತ್‌ ಕಮಲ್‌ ಮತ್ತು ಜಿ.ಸತ್ಯನ್ ಅವರು ಕ್ರಮವಾಗಿ 2015 ಮತ್ತು 2019ರಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಆರನೇ ಸ್ಥಾನ ಗಳಿಸಿದ್ದೇ ಭಾರತದ ಆಟಗಾರರ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ಮಣಿಕಾ ಪದಕದ ಸುತ್ತಿನಲ್ಲಿ 11-6, 6-11, 11-7, 12-10, 4-11, 11-2 (4-2) ಅಂತರದಿಂದ ಜಪಾನ್ ಆಟಗಾರ್ತಿ, ಆರನೇ ರ‍್ಯಾಂಕಿನ ಹೀನಾ ಹಯಾತಾ ಅವರನ್ನು ಪರಾಭವಗೊಳಿಸಿ ಕಂಚಿನ ಪದಕಕ್ಕೆ ಕೊರಳೊಡಿದ್ದರು.

ಪದಕ ಗೆದ್ದ ಬಳಿಕ ಮಾತನಾಡಿದ ಮಣಿಕಾ, “ಅಗ್ರ ಕ್ರಮಾಂಕದ ಆಟಗಾರ್ತಿಯರನ್ನು ಮಣಿಸಿ ಪದಕ ಜಯಿಸಿದ್ದು ದೊಡ್ಡ ಸಾಧನೆ. ಅವರ ವಿರುದ್ಧದ ಆಟ ಮತ್ತು ಹೋರಾಟವನ್ನು ಆನಂದಿಸಿದ್ದೇನೆ. ಮುಂಬರುವ ಎಲ್ಲ ಟೂರ್ನಿಗಳಲ್ಲೂ ಇದೇ ರೀತಿಯ ಬಿಲಿಷ್ಠ ಪ್ರದರ್ಶನ ತೋರುವೆ’ ಎಂದು ಹೇಳಿದರು.

ಸೆಮಿಫೈನಲ್​ನಲ್ಲಿ ಸೋಲು

ಮಣಿಕಾ ಬಾತ್ರಾ ಅವರು ದಿನದ ಆರಂಭದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಮಿಮಾ ಇಟೊ ವಿರುದ್ಧ 8-11, 11-7, 7-11, 6-11, 11-8, 7-11 (2-4) ಅಂತರದಿಂದ ಸೋಲು ಕಂಡಿದ್ದರು. ಬಳಿಕ ಕಂಚಿನ ಪದಕದ ಸುತ್ತಿನ ಹಣಾಹಣಿಯಲ್ಲಿ ತಮ್ಮ ಎಲ್ಲ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಿದ ಮಣಿಕಾ, ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಮಿಮಾ ಇಟೊ ವಿರುದ್ಧ ಪಾರಮ್ಯ ಮೆರೆದು ಭಾರತಕ್ಕೆ ಐತಿಹಾಸಿಕ ಪದಕವೊಂದನ್ನು ತಂದುಕೊಟ್ಟರು.

ಇದನ್ನೂ ಓದಿ | ITTF-ATTU Asian Cup | ಏಷ್ಯನ್ ಟಿಟಿ; ಸೆಮಿಫೈನಲ್​ಗೆ ಮಣಿಕಾ, ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

Exit mobile version