ನವದೆಹಲಿ: ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಚೀನದ ಹ್ಯಾಂಗ್‌ಝೂನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಬಿಸಿಸಿಐ ಪರಿಷ್ಕೃತ ಭಾರತದ ಮಹಿಳಾ ಮತ್ತು ಪುರುಷರ ತಂಡವನ್ನು ಪ್ರಕಟಿಸಿದೆ. ಈ ಮೊದಲು ತಂಡದಲ್ಲಿ ಸ್ಥಾನ ಪಡೆದಿದ್ದ ಯುವ ವೇಗಿ ಶಿವಂ(Shivam Mavi) ಮಾವಿ ಮತ್ತು ಅಂಜಲಿ ಸರ್ವಾಣಿ(Anjali Sarvani ) ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಪರಿಷ್ಕೃತ ತಂಡವನ್ನು ಪ್ರಕಟಿಸಲಾಗಿದೆ ಎಂದು ಬಿಸಿಸಿಐ(BCCI) ತಿಳಿಸಿದೆ.
“ಶಿವಂ ಮಾವಿ ಅವರು ಕೆಲವು ದಿನಗಳ ಹಿಂದೆ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದು ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಏಷ್ಯನ್ ಗೇಮ್ಸ್ನಿಂದ ಹೊರಬಿದ್ದಿದ್ದಾರೆ. ಅವರು ಶೀಘ್ರದಲ್ಲೇ ಗುಣಮುಖರಾಗಿ ಕ್ರಿಕೆಟ್ಗೆ ಮರಳುವಂತಾಗಲಿ, ಅವರ ಬದಲಿಗೆ ಆಕಾಶ್ ದೀಪ್ಗೆ(Akash Deep) ತಂಡದಲ್ಲಿ ಸ್ಥಾನ ನೀಡಲಾಗಿದೆ” ಎಂದು ಬಿಸಿಸಿಐ ತಿಳಿಸಿದೆ. ಏತನ್ಮಧ್ಯೆ, ಮೊಣಕಾಲು ಗಾಯದಿಂದಾಗಿ ಮಹಿಳಾ ತಂಡದಿಂದ ಅಂಜಲಿ ಸರ್ವಾಣಿ ಹೊರಗುಳಿದಿದ್ದು ಅವರ ಸ್ಥಾನಕ್ಕೆ ಮೀಸಲು ಆಟಗಾರ್ತಿಯಾಗಿದ್ದ ಪೂಜಾ ವಸ್ತ್ರಾಕರ್ ಅವರನ್ನು ಪ್ರಧಾನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಚೊಚ್ಚಲ ಬಾರಿ ಭಾರತ ತಂಡ ಸ್ಪರ್ಧೆ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್, ಪದಕ ಸ್ಪರ್ಧೆಯಾಗಿ ನಡೆದಿರುವುದು ಕೇವಲ ಎರಡು ಸಲ ಮಾತ್ರ. ಆದರೆ ಭಾರತ ಇದುವರೆಗೆ ಆಡಿಲ್ಲ. ಈ ಬಾರಿ ಪುರುಷರ ತಂಡ ಮತ್ತು ಮಹಿಳೆಯರ ತಂಡ ಕಣಕ್ಕಿಳಿಯುತ್ತಿದೆ. ಪುರುಷರ ತಂಡವನ್ನು ಋತುರಾಜ್ ಗಾಯಕ್ವಾಡ್, ಮಹಿಳಾ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್)ರ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ನಡೆದಿದ್ದು ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು.
ಭಾರತ ಪುರುಷರ ಪರಿಷ್ಕೃತ ತಂಡ
ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಆಕಾಶ್ ದೀಪ್, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್ (ವಿ.ಕೀ)
ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್
ಪರಿಷ್ಕೃತ ಮಹಿಳಾ ಕ್ರಿಕೆಟ್ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್ ಜೋತ್ ಕೌರ್, ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆತುಜಾ,ಅನುಷಾ ಬಾರೆಡ್ಡಿ.
ಸ್ಟ್ಯಾಂಡ್‌ಬೈ ಆಟಗಾರರು: ಹರ್ಲೀನ್ ಡಿಯೋಲ್, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸೈಕಾ ಇಶಾಕ್.