ನವದೆಹಲಿ: ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶ್ ಫೋಗಟ್(Vinesh Phogat) ಮತ್ತು ಬಜರಂಗ್ ಪುನಿಯಾ(bajrang punia) ಅವರಿಗೆ ಏಷ್ಯನ್ ಗೇಮ್ಸ್ (Asian Games 2023)ಟ್ರಯಲ್ಸ್‌ನಲ್ಲಿ(Asian Games trials) ವಿನಾಯಿತಿ ನೀಡುವ ವಿಚಾರ ಕುರಿತು ದೆಹಲಿ ಹೈಕೋರ್ಟ್(Delhi High Court) ತನ್ನ ತೀರ್ಪನ್ನು ಇಂದು (ಶನಿವಾರ) ಪ್ರಕಟಿಸಲಿದೆ. ಇದಕ್ಕೂ ಮುನ್ನ, ಗುರುವಾರ ನಡೆದ ವಿಚಾರಣೆಯಲ್ಲಿ, ನ್ಯಾಯಾಲಯವು ಉತ್ತರ ಸಲ್ಲಿಸಲು ಡಬ್ಲ್ಯೂಎಫ್ಐಗೆ ಕೇಳಿತ್ತು. ಈ ಇಬ್ಬರಿಗೆ ಯಾವ ಆಧಾರದಲ್ಲಿ ವಿನಾಯಿತಿ ನೀಡಲಾಗಿದೆ?, ಎಲ್ಲರಂತೆ ಅವರೂ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿ ಎಂದು ಹಲವರು ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕಿರಿಯ ಕುಸ್ತಿಪಟುಗಳಾದ ಅಂತಿಮ್ ಪಂಘಲ್, ಸುರ್ಜೀತ್ ಕಲ್ಕಲ್ ಅವರು ನೇರಪ್ರವೇಶವನ್ನು ಪ್ರಶ್ನಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಅಚ್ಚರಿ ಎಂದರೆ ಬಜರಂಗ್ ಮತ್ತು ವಿನೇಶ್ ಜತೆ ಬ್ರಿಜ್ ಭೂಷಣ್(Bhushan Sharan Singh) ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಸಾಕ್ಷಿ ಮಲಿಕ್ ಕೂಡ ತಮ್ಮ ಈ ನೇರ ಪ್ರವೇಶವನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.
ಇಂದು ಪ್ರಕಟವಾಗುವ ತೀರ್ಪಿನ ಮೇಲೆ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರ ಏಷ್ಯನ್ ಗೇಮ್ಸ್ ಭವಿಷ್ಯ ನಿರ್ಧಾರವಾಗಲಿದೆ. ಒಂದೊಮ್ಮೆ ತೀರ್ಪು ವಿರುದ್ಧವಾಗಿ ಬಂದರೆ ಆಗ ಉಭಯ ಕುಸ್ತಿಪಟುಗಳು ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಲಿದೆ.
ಆಗಸ್ಟ್ 12ಕ್ಕೆ ಕುಸ್ತಿ ಒಕ್ಕೂಟದ ಚುನಾವಣೆ
ಹಲವು ಕಾರಣಗಳಿಂದ ಮುಂದೂಡಿಕೆಯಾಗಿದ್ದ ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆಯ ದಿನಾಂಕ ಅಂತಿಮಗೊಂಡಿದೆ. ಆಗಸ್ಟ್ 12ರಂದು ಈ ಚುನಾವಣೆ ನಡೆಯಲಿದೆ. ಆಗಸ್ಟ್ 7ಕ್ಕೆ ಅಭ್ಯರ್ಥಿಗಳ ಅಂತಿಮಪಟ್ಟಿ ಹೊರಬೀಳಲಿದೆ. ಬಣಗಳಾಗಿ ಇಬ್ಭಾಗವಾಗಿರುವ ಮಹಾರಾಷ್ಟ್ರ ಸಂಸ್ಥೆಗೆ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ Asian Games: ನೇರ ಪ್ರವೇಶ, ಕುಸ್ತಿಪಟುಗಳ ಮಧ್ಯೆ ಒಗ್ಗಟ್ಟು ಮುರಿಯುವ ಹುನ್ನಾರ; ಸಾಕ್ಷಿ ಮಲಿಕ್ ಆರೋಪ
ಆರಂಭದಲ್ಲಿ ಮಧ್ಯಾಂತರ ಸಮಿತಿ ಜುಲೈ 6ಕ್ಕೆ ಚುನಾವಣೆ ನಿಗದಿ ಮಾಡಿತ್ತು. ಆದರೆ ಅಮಾನ್ಯಗೊಂಡ ಮಹಾರಾಷ್ಟ್ರ, ಹರಿಯಾಣ, ತೆಲಂಗಾಣ, ರಾಜಸ್ಥಾನ, ಹಿಮಾಚಲ ಪ್ರದೇಶಗಳು ತಮಗೂ ಅವಕಾಶ ಕೊಡಬೇಕೆಂದು ಆಗ್ರಹಿಸಿದ್ದ ಕಾರಣ ಈ ದಿನಾಂಕವನ್ನು ಜುಲೈ 11ಕ್ಕೆ ಮುಂದೂಡಲಾಗಿತ್ತು. ಇನ್ನೇನು ಚುನಾವಣೆ ನಡೆಯಬೇಕು ಎನ್ನುವಾಗ ಅಸ್ಸಾಂ ಸಂಸ್ಥೆ ತನಗೆ ಮತದಾನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿತ್ತು. ಹೀಗಾಗಿ ಗುವಾಹಾಟಿ ಉಚ್ಚ ನ್ಯಾಯಾಲಯ ಚುನಾವಣೆಗೆ ತಡೆ ನೀಡಿತು. ಹೀಗೆ ಹಲವು ಬಾರಿ ದಿನಾಂಕ ನಿಗದಿಯಾಗಿ ಮುಂದೂಡಲ್ಪಟ್ಟಿತ್ತು.
ಪ್ರತಿ ಬಾರಿ ಒಂದಲ್ಲ ಒಂದು ಸಮಸ್ಯೆಯಿಂದ ಮುಂದೂಡಿಕೆಯಾಗುತ್ತಿದ್ದ ಈ ಚುನಾವಣೆಯ ವಿಚಾರದಲ್ಲಿ ಅಂತಿಮವಾಗಿ ಸ್ವತಃ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಎಲ್ಲ ತಡೆಗಳನ್ನು ನಿವಾರಿಸಿ, ಚುನಾವಣೆ ನಡೆಸಬೇಕೆಂದು ಆದೇಶಿಸಿದೆ. ಚುನಾವಣೆಯಲ್ಲಿ 24 ರಾಜ್ಯಸಂಸ್ಥೆಗಳ 48 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆಗಸ್ಟ್ 1ರಂದು ನಾಮಪತ್ರಗಳನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ಅವಿರೋಧವಾಗಿ ಆಯ್ಕೆಯಾಗುವ ಪರಿಸ್ಥಿತಿ ಇಲ್ಲವಾದರೆ ಆಗಸ್ಟ್ 12ಕ್ಕೆ ಮತದಾನ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.