Site icon Vistara News

Asian Games 2023: ಪುರುಷರ ಕ್ಯಾನೋ ತಂಡಕ್ಕೆ ಕಂಚಿನ ಪದಕ

Arjun Singh and Sunil Singh

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನ 10ನೇ ದಿನವಾದ ಮಂಗಳವಾರ (Asian Games 2023) ಭಾರತ ಕಂಚಿನ ಪದಕ ಗೆಲ್ಲುವ ಮೂಲಕ ಪದಕದ ಖಾತೆ ತೆರದಿದೆ. ಇಂದು ಬೆಳಗ್ಗೆ ನಡೆದ ಪುರುಷರ ಕ್ಯಾನೋ ಡಬಲ್ 1000 ಮೀ ಫೈನಲ್‌ನಲ್ಲಿ ಭಾರತದ ಅರ್ಜುನ್ ಸಿಂಗ್(Arjun Singh) ಮತ್ತು ಸುನಿಲ್ ಸಿಂಗ್(Sunil Singh) ಅವರು ಕಂಚಿನ ಪದಕ ಗೆದ್ದಿದ್ದಾರೆ.

ಭಾರತದ ಜೋಡಿಯು 3:53.329 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಏಷ್ಯನ್​ ಗೇಮ್ಸ್​ ಇತಿಹಾಸದಲ್ಲಿ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಇಲಿದ 2ನೇ ಪದಕವಾಗಿದೆ. ಇದಕ್ಕೂ ಮುನ್ನ 1994 ರಲ್ಲಿ ಹಿರೋಷಿಮಾದಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ ಜಾನಿ ರೋಮೆಲ್ ಮತ್ತು ಸಿಜಿ ಕುಮಾರ್ ಸದಾನಂದನ್ ಕಂಚು ಗೆದ್ದಿದ್ದರು. ಉಜ್ಬೇಕಿಸ್ತಾನದ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್ ಉಗ್ಲಿ (3:43.796 ಸೆಕೆಂಡು) ಚಿನ್ನ ಗೆದ್ದರೆ, ಕಜಕಿಸ್ತಾನದ ಟಿಮೊಫಿ ಯೆಮೆಲಿಯಾನೊವ್ ಮತ್ತು ಸೆರ್ಗೆ ಯೆಮೆಲಿಯಾನೊವ್ (3:49.991 ಸೆಕೆಂಡ್‌) ಬೆಳ್ಳಿ ಪಡೆದರು. ಆರ್ಚರಿಯಲ್ಲಿ ಭಾರತದ ಇಬ್ಬರು ಸ್ಪರ್ಧಿಗಳು ಫೂನಲ್​ ಪ್ರವೇಶಿಸಿದ್ದು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ದಾಖಲೆ ಬರೆಯಲು ಸಜ್ಜಾದ ಭಾರತ

ಭಾರತದ ಪದಕ ಗಳಿಕೆ 60ರ ಗಡಿ ದಾಟಿದೆ. ಭಾರತ 2010ರಲ್ಲಿ 65 ಪದಕ 2018ರಲ್ಲಿ 70 ಪದಕ ಗೆದ್ದಿತ್ತು. ಈ ಬಾರಿ ಹಳೆಯ ದಾಖಲೆಯನ್ನು ಮುರಿಯುವ ಸಾಧ್ಯತೆ ಅಧಿಕವಾಗಿದೆ. ಸದ್ಯ 13 ಚಿನ್ನ, 24 ಬೆಳ್ಳಿ ಹಾಗೂ 24 ಕಂಚು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ. ಸದ್ಯಕ್ಕೆ 61 ಪದಕ ಭಾರತದ ಬಳಿ ಇದೆ.

ಸೋಮವಾರ ನಡೆದಿದ್ದ ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್‌ ಚೌಧರಿ ಬೆಳ್ಳಿ ಹಾಗೂ ಪ್ರೀತಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇನ್ನು ಮಹಿಳೆಯರ ಲಾಂಗ್‌ ಜಂಪ್‌ನಲ್ಲಿ 22 ವರ್ಷದ ಆ್ಯನ್ಸಿ ಸೋಜನ್‌ಗೆ ಬೆಳ್ಳಿ ಪದಕ ಲಭಿಸಿತ್ತು. ತಮ್ಮ 5ನೇ ಪ್ರಯತ್ನದಲ್ಲಿ 6.63 ದೂರಕ್ಕೆ ಜಿಗಿದ ಆ್ಯನ್ಸಿ 2ನೇ ಸ್ಥಾನಿಯಾದರು.

ಇದನ್ನೂ ಓದಿ Asian Games 2023: ನೇಪಾಳ ವಿರುದ್ಧ 23 ರನ್​ ಗೆಲುವು; ಸೆಮಿಗೆ ಲಗ್ಗೆಯಿಟ್ಟ ಟೀಮ್​ ಇಂಡಿಯಾ

ಮೂರನೇ ಸ್ಥಾನ ಪಡೆದರೂ ಭಾರತಕ್ಕೆ ಒಲಿದ ಬೆಳ್ಳಿ

4x 400 ಮೀಟರ್‌ ಮಿಶ್ರ ರಿಲೇ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿತ್ತು. 3 ನಿಮಿಷ 14.25 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಶ್ರೀಲಂಕಾ 2ನೇ ಸ್ಥಾನ ಪಡೆದಿತ್ತು. ಆದರೆ ಲಂಕಾದ ಸ್ಪರ್ಧಿ ಟ್ರ್ಯಾಕ್‌ನ ಲೇನ್ ಮೀರಿ ಓಡಿದ್ದರಿಂದ ತಂಡವನ್ನು ಅನರ್ಹಗೊಳಿಸಿ ಭಾರತಕ್ಕೆ ಬೆಳ್ಳಿ ನೀಡಲಾಗಿತ್ತು. ಭಾರತದ ತಂಡದಲ್ಲಿ ಮುಹಮ್ಮದ್‌ ಅಜ್ಮಲ್‌, ವಿದ್ಯಾ ರಾಮ್‌ರಾಜ್‌, ರಾಜೇಶ್‌ ರಮೇಶ್‌, ಶುಭಾ ವೆಂಕಟೇಶನ್‌ 3 ನಿಮಿಷ 14.34 ಸೆಕೆಂಡ್‌ಗಳಲ್ಲಿ ಕ್ರಮಿಸಿ ಮೂರನೇ ಸ್ಥಾನ ಪಡೆದಿದ್ದರು.

ಟೇಬಲ್‌ ಟೆನಿಸ್‌ನ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸುತೀರ್ಥ ಮುಖರ್ಜಿ-ಐಹಿಕಾ ಮುಖರ್ಜಿ ಐತಿಹಾಸಿಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಏಷ್ಯಾಡ್‌ ಇತಿಹಾಸದಲ್ಲೇ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಸಾಧನೆ ಮಾಡಿದ್ದರು.

Exit mobile version