ಹ್ಯಾಂಗ್‌ಝೌ: ಒಂದೆಡೆ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಏಷ್ಯನ್ ಗೇಮ್ಸ್(Asian Games 2023) ನಡೆಯುತ್ತಿದೆ. ಶುಕ್ರವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಯುವ ಪಡೆ ಬಾಂಗ್ಲಾದೇಶ(India vs Bangladesh, Semi Final) ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಬಾಂಗ್ಲಾವನ್ನು ಬಗ್ಗುಬಡಿದು ಐತಿಹಾಸಿಕ ಪದಕ ಸುತ್ತಿಗೆ ನೆಗೆಯುವುದು ಋತುರಾಜ್ ಗಾಯಕ್ವಾಡ್ ಪಡೆದ ಯೋಜನೆಯಾಗಿದೆ.
ನೇಪಾಳ ವಿರುದ್ಧದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಚೊಚ್ಚಲ ಟಿ20 ಆತಕ ಹಾಗೂ ಹಲವು ದಾಖಲೆ ಬರೆದ ಎಡಗೈ ಡ್ಯಾಶಿಂಗ್ ಓಪನರ್ ಯಶಸ್ವಿ ಜೈಸ್ವಾಲ್ ಮೇಲೆ ಈ ಪಂದ್ಯದಲ್ಲಿಯೂ ನಿರೀಕ್ಷೆ ಮಾಡಲಾಗಿದೆ. ಹಾಗೆಯೇ ರಿಂಕು ಸಿಂಗ್ ಮತ್ತು ಶಿವಂ ದುಬೆ ಅವರ ಬ್ಯಾಟಿಂಗ್ ಮೇಲೆಯೂ ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ತಿಲಕ್ ವರ್ಮ ಮತ್ತು ನಾಯಕ ಗಾಯಕ್ವಾಡ್ ಈ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿ ಬ್ಯಾಟ್ ಬೀಸಬೇಕಿದೆ. ಜೈಸ್ವಾಲ್ ಶತಕ ಬಾರಿಸದೇ ಹೋಗಿದ್ದರೆ ಭಾರತ ಸೋಲು ಕಾಣುತ್ತಿತ್ತು. ಗೆದ್ದ ಅಂತರ ಕೇವಲ 23 ರನ್. ಹೀಗಾಗಿ ಸಂಘಟಿತ ಬ್ಯಾಟಿಂಗ್ ಅಗತ್ಯ.
ಬೌಲಿಂಗ್ ಸುಧಾರಣೆ ಅತ್ಯಗತ್ಯ
ಭಾರತ ಬೌಲಿಂಗ್ಗೆ ಕ್ಷಿಪ್ರ ಗತಿಯ ಸುಧಾರಣೆ ಅಗತ್ಯವಿದೆ. ಕಳೆದ ಪಂದ್ಯದಲ್ಲಿ 200ರ ಗಡಿ ದಾಟಿದರೂ ಗೆದ್ದ ಅಂತರದ ಮಾತ್ರ ಬಹಳ ಚಿಕ್ಕದು. ಅದೂ ಕೂಡ ಕ್ರಿಕೆಟ್ ಶಿಶು ನೇಪಾಳ ವಿರುದ್ಧ. ಇದೇ ಪ್ರದರ್ಶನವನ್ನು ಅನುಭವಿ ಬಾಂಗ್ಲಾ ಎದುರು ಕೂಡ ಮುಂದುವರಿಸಿದರೆ ಸೋಲು ಕಟ್ಟಿಟ್ಟ ಬುತ್ತಿ. ಅವೇಶ್ ಖಾನ್ ಮೂರು ವಿಕೆಟ್ ಪಡೆದರೂ ದುಬಾರಿಯಾಗಿದ್ದರು. ಅವರ ಬೌಲಿಂಗ್ನಲ್ಲಿ ಅವೇಶವೇ ಕಾಣುತ್ತಿಲ್ಲ. ಆರ್ಶ್ದೀಪ್ ಸಿಂಗ್ ತಮ್ಮ ಎಸೆತಕ್ಕೆ ಸಾಣೆ ಹಿಡಿಯಬೇಕಿದೆ. ಇದ್ದ ಬೌಲರ್ಗಳಲ್ಲಿ ರವಿ ಬಿಷ್ಟೋಯಿ ಪ್ರದರ್ಶನ ಅಡ್ಡಿಯಿಲ್ಲ. ವಿಕೆಟ್ ಟೇಕಿಂಗ್ ಜತೆಗೆ ರನ್ ಸೋರಿಕೆಗೂ ಬ್ರೇಕ್ ಹಾಕುವಲ್ಲಿ ಸಮರ್ಥರಿದ್ದಾರೆ.
ಇದನ್ನೂ ಓದಿ Asian Games 2023: ಹ್ಯಾಟ್ರಿಕ್ ಚಿನ್ನ ಗೆದ್ದ ಭಾರತ; ಪದಕ ಸಂಖ್ಯೆ 84ಕ್ಕೆ ಏರಿಕೆ
ಬಾಂಗ್ಲಾ ಯಶಸ್ವಿ ತಂಡ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪದಕ ಸ್ಪರ್ಧೆಯಾಗಿ ನಡೆದಿರುವುದು ಕೇವಲ ಎರಡು ಸಲ ಮಾತ್ರ. 2010 (ಗ್ವಾಂಗ್‌ಝೂ)ರಲ್ಲಿ ನಡೆದ ಚೊಚ್ಚಲ ಆವೃತ್ತಿಯಲ್ಲೇ ಬಾಂಗ್ಲಾದೇಶ ಕಪ್ ಎತ್ತಿತ್ತು. ಹೀಗಾಗಿ ಬಾಂಗ್ಲಾ ಏಷ್ಯನ್ ಗೇಮ್ಸ್ನ ಯಶಸ್ವಿ ತಂಡವಾಗಿದೆ. ಭಾರತ ಎಚ್ಚರಿಕೆಯ ಹೆಜ್ಜೆಯಿಟ್ಟು ಆಡಬೇಕಿದೆ. 2014 (ಇಂಚಿಯಾನ್)ರ ಗೇಮ್ಸ್‌ನಲ್ಲಿ ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಭಾರತ ಇದೇ ಮೊದಲ ಬಾರಿ ಕಣಕ್ಕಿಳಿದಿದೆ. ದಿನದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನ ತಂಡಗಳು ಕಾದಾಟ ನಡೆಸಲಿವೆ.
ಸಂಭಾವ್ಯ ತಂಡ
ಭಾರತ: ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಶಿವಂ ದುಬೆ, ಸಾಯಿ ಕಿಶೋರ್.
ಬಾಂಗ್ಲಾದೇಶ: ಜೇಕರ್ ಅಲಿ (ವಿ.ಕೀ), ಪರ್ವೇಜ್ ಹೊಸೈನ್ ಎಮನ್, ಝಾಕಿರ್ ಹಸನ್, ಸೈಫ್ ಹಸನ್ (ನಾಯಕ), ಮಹ್ಮುದುಲ್ ಹಸನ್ ಜಾಯ್, ಅಫೀಫ್ ಹೊಸೈನ್, ರಿಶಾದ್ ಹೊಸೈನ್, ಶಹಾದತ್ ಹೊಸೈನ್, ಸುಮನ್ ಖಾನ್, ರಕಿಬುಲ್ ಹಸನ್, ರಿಪಾನ್ ಮೊಂಡೋಲ್.