Site icon Vistara News

Asian Games 2023: ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಮಹಿಳಾ ಬ್ಯಾಡ್ಮಿಂಟನ್ ತಂಡ ; ಸ್ಕ್ವಾಷ್​ನಲ್ಲಿ ಪದಕ ಖಾತ್ರಿ

WOMEN'S SQUASH TEAM

ಹ್ಯಾಂಗ್‌ಝೌ: ಗರುವಾರ ನಡೆದ ಏಷ್ಯನ್ ಗೇಮ್ಸ್‌ನ(Asian Games 2023) ಬ್ಯಾಡ್ಮಿಂಟನ್​ನಲ್ಲಿ ಭಾರತ ಮಹಿಳಾ ತಂಡ(Indian women’s Badminton team) 3-0 ಅಂಕಗಳಿಂದ ಮಂಗೋಲಿಯಾವನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದೆ. ಅತ್ತ ಸ್ಕ್ವಾಷ್​ನಲ್ಲಿ ಭಾರತ ಮಹಿಳಾ ತಂಡ ಸೆಮಿಫೈನಲ್​ ಪ್ರವೇಶಿಸಿ ಪದಕವೊಂದನ್ನು ಖಾತ್ರಿಪಡಿಸಿಕೊಂಡಿದೆ.

ಇಂದು ನಡೆದ ಮಹಿಳಾ ತಂಡದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಅನುಭವಿಗಳ ಮುಂದೆ ಮಂಗೋಲಿಯಾ ಆಟಗಾರ್ತಿಯರು ಸಂಪೂರ್ಣ ಮಂಕು ಪ್ರದರ್ಶ ತೋರಿ ಸೋಲುಂಡರು. ಒಂದು ಗೇಮ್​ ಕೂಟ ಗೆಲ್ಲದೆ ನಿರಾಸೆ ಮೂಡಿಸಿದರು. ಭಾರತ ಪರ ಮೊದಲ ಪಂದ್ಯದಲ್ಲಿ ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಆಡಿದರು. ಈ ಪಂದ್ಯವನ್ನು 21-3, 21-3 ನೇರ ಗೇಮ್​ಗಳಿಂದ ಗೆದ್ದರು. 20 ನಿಮಿಷಗಳಲ್ಲಿ ಪಂದ್ಯ ಅಂತ್ಯ ಕಂಡಿತು. ಎರಡನೇ ಸಿಂಗಲ್ಸ್‌ನಲ್ಲಿ ಯುವ ಆಟಗಾರ್ತಿ ಅಶ್ಮಿತಾ ಚಲಿಹಾ ಖೆರ್ಲೆನ್ ದರ್ಖಾನ್‌ಬಾಟರ್ ವಿರುದ್ಧ 21-2, 21-3 ಅಂತರದಿಂದ ಗೆದ್ದರೆ, ಅನುಪಮಾ ಉಪಾಧ್ಯಾಯ ಮೂರನೇ ಸಿಂಗಲ್​ನಲ್ಲಿ ಗೆದ್ದು ಬೀಗಿದರು. ಭಾರತ ನಾಕೌಟ್ ಸುತ್ತಿನಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ Asian Games 2023: ಚಿನ್ನದ ನಿರೀಕ್ಷೆಯಲ್ಲಿ ಚೀನಾಕ್ಕೆ ತೆರಳಿದ ಭಾರತ ಪುರುಷರ ಕ್ರಿಕೆಟ್ ತಂಡ

ಥಾಯ್ಲೆಂಡ್ ತಂಡದಲ್ಲಿ ವಿಶ್ವದ ನಂ.12 ಶ್ರೆಯಾಂಕದ ಪೋರ್ನ್‌ಪಾವೀ ಚೊಚುವಾಂಗ್ ಮತ್ತು ವಿಶ್ವ ನಂ. 17 ಶ್ರೇಯಾಂಕದ ಸುಪಾನಿಡಾ ಕಟೆಥಾಂಗ್ ಸವಾಲು ಎದುರಾಗಲಿದೆ. ಸಿಂಧು ಪೋರ್ನ್‌ಪಾವೀ ಚೊಚುವಾಂಗ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಸ್ಕ್ವಾಷ್​ನಲ್ಲಿ ಪದಕ ಖಾತ್ರಿ

ಭಾರತದ ಮಹಿಳಾ ಸ್ಕ್ವಾಷ್‌ ತಂಡ ಗುರುವಾರ ಮಲೇಷ್ಯಾ ವಿರುದ್ಧ ಸೋಲು ಕಂಡರೂ ಸೆಮಿಫೈನಲ್​ ಪ್ರವೇಶಿಸಿ ಪದಕವೊಂದನ್ನು ಖಾತ್ರಿ ಪಡಿಸಿದೆ. ಎ ಗುಂಪಿನಲ್ಲಿ ಆಡಿದ ಭಾರತ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶ ಪಡೆಯಿತು. ಶುಕ್ರವಾರ ನಡೆಯುವ ಸೆಮಿಫೈನಲ್​ನಲ್ಲಿ ಅಜೇಯ ಹಾಂಗ್​ಕಾಂಗ್ ತಂಡದ ಸವಾಲು ಎದುರಿಸಲಿದೆ.

2 ಪದಕ ಗೆದ್ದ ಭಾರತ

ಗುರುವಾರ ಬೆಳಗ್ಗೆಯೇ ಭಾರತ ಚಿನ್ನ ಮತ್ತು ಬೆಳ್ಳಿ ಪದಕದ ಖಾತೆ ತೆರೆಯಿತು. ಮೊದಲು ನಡೆದ ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕವನ್ನು ಗೆದ್ದರೆ, ಆ ಬಳಿಕ ನಡೆದ ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಅರ್ಜುನ್‌ ಸಿಂಗ್‌ ಚೀಮಾ, ಸರಬ್‌ಜೋತ್‌ ಸಿಂಗ್‌, ಶಿವ ನರ್ವಾಲ್‌ ಚಿನ್ನ ಗೆದ್ದರು.

ರೋಶಿಬಿನಾ ದೇವಿ, 60 ಕೆಜಿ ವುಶು ಫೈನಲ್‌ನಲ್ಲಿ ಅವರು ಚೀನಾದ ಕ್ಸಿಯಾವೊವಿ ವಿರುದ್ಧ ಸೋತು ಬೆಳ್ಳಿ ಪದಕ ಗೆದ್ದರು. ಬುಧವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ರೋಶಿಬಿನಾ ದೇವಿ ವಿಯೆಟ್ನಾನ್‌ ಥಿ ತು ಎನ್‌ಗುಯೆನ್ ಅವರನ್ನು ಮಣಿಸಿ ಫೈನಲ್ ತಲುಪಿದ್ದರು. ಸಂಧ್ಯಾರಾಣಿ ದೇವಿ ಅವರ ಬಳಿಕ ವುಶು ಸ್ಪ‍ರ್ಧೆಯಲ್ಲಿ ಫೈನಲ್‌ಗೆ ತಲುಪಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ರೋಶಿಬಿನಾ ಪಾತ್ರರಾಗಿದ್ದರು. 2018ರಲ್ಲಿ ನಡೆದ ಜಕಾರ್ತಾ ಏಷ್ಯನ್ ಕ್ರೀಡಾಕೂಟದ 60 ಕೆ.ಜಿ ವಿಭಾಗದಲ್ಲಿ ರೊಶಿಬಿನಾ ಕಂಚಿನ ಪದಕವನ್ನು ಗೆದ್ದಿದ್ದರು.

ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಒಟ್ಟು 1734 ಅಂಕಗಳಿಸಿ ಚಿನ್ನ ಗೆದ್ದಿತು. ಅರ್ಜುನ್‌ ಸಿಂಗ್‌ ಚೀಮಾ, ಸರಬ್‌ಜೋತ್‌ ಸಿಂಗ್‌, ಶಿವ ನರ್ವಾಲ್‌ ಚಿನ್ನ ಗೆದ್ದ ಶೂಟರ್​ಗಳು. ಇದರಲ್ಲಿ ಸರಬ್‌ಜೋತ್‌ ಸಿಂಗ್‌ ವೈಯಕ್ತಿ ವಿಭಾಗದಲ್ಲಿ 580 ಅಂಕಗಳಿಸಿ ಮೊದಲ ಸ್ಥಾನಿಯಾದರು.

Exit mobile version