ಹ್ಯಾಂಗ್‌ಝೌ (ಚೀನಾ): ಏಷ್ಯನ್ ಗೇಮ್ಸ್ನ(Asian Games 2023) ಮಹಿಳೆಯರ ಕ್ರಿಕೆಟ್(asian games cricket) ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಫೈನಲ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಚಿನ್ನದ ಪದಕಕ್ಕಾಗಿ ಸೆಣಸಾಟ ನಡೆಸಲಿದೆ. ಭಾರತ ಗೆದ್ದರೆ ಐತಿಹಾಸಿಕ ಸಾಧನೆ ಮಾಡಲಿದೆ. ಸೋಮವಾರ ನಡೆದ 10 ಮೀ. ಪುರುಷರ ಶೂಟಿಂಗ್ ವಿಭಾಗದಲ್ಲಿ ಭಾರತ ಮೊದಲ ಚಿನ್ನದ ಪದಕ ಜಯಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮಹಿಳಾ ಕ್ರಿಕೆಟ್ ತಂಡವೂ ಗೆದ್ದರೆ ಒಂದೇ ದಿನ ಎರಡು ಚಿನ್ನದ ಪದಕ ಲಭಿಸಿದಂತಾಗುತ್ತದೆ.
ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ತಂಡ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಮಣಿಸಿ ಫೈನಲ್ಗೆ ಲಗ್ಗೆಯಿಟ್ಟತ್ತು. ಪೂಜಾ ವಸ್ತ್ರಾಕರ್ ಅವರ ಅಮೋಘ ಬೌಲಿಂಗ್ ನಿರ್ವಹಣೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಫೈನಲ್ ಪಂದ್ಯಕ್ಕೆ ಕೌರ್ ಆಗಮನ
ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಅಂಪೈರ್ಗಳ ಗುಣಮಟ್ಟದ ಬಗ್ಗೆ ಬಹಿರಂಗವಾಗಿಯೇ ಟೀಕೆ ವ್ಯಕ್ತಪಡಿಸಿ ಎರಡು ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಅಮಾನತು ಶಿಕ್ಷೆಯಿಂದಾಗಿ ಅವರು ಎರಡು ಪಂದ್ಯಗಳನ್ನು ಆಡಿರಲಿಲ್ಲ. ಹೀಗಾಗಿ ಸ್ಮೃತಿ ಮಂಧಾನ ತಂಡವನ್ನು ಮುನ್ನಡೆಸಿದ್ದರು. ಫೈನಲ್ ಪಂದ್ಯಕ್ಕೆ ಕೌರ್ ನಾಯಕತ್ವ ವಹಿಸಲಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾದೇಶ ಪೂಜಾ ವಸ್ತ್ರಾಕರ್ ಅವರ ಬೌಲಿಂಗ್ ದಾಳಿಗೆ ನಲುಗಿ 17.5 ಓವರ್‌ಗಳಲ್ಲಿ ಕೇವಲ 51 ರನ್ನಿಗೆ ಆಲೌಟಾಯಿತು. ಸುಲಭದ ಮೊತ್ತವನ್ನು ಬೆನ್ನಟಿದ ಭಾರತ ತಂಡ 8.2 ಓವರ್‌ಗಳಲ್ಲಿಯೇ ಗುರಿ ತಲುಪಿ ಫೈನಲ್ ಪ್ರವೇಶ ಪಡೆಯಿತು. ಅಂಜಲಿ ಸರ್ವಾನಿ ಅವರ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ಪೂಜಾ ವಸ್ತ್ರಾಕರ್ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಕೆವಲ 17 ರನ್ನಿಗೆ 4 ವಿಕೆಟ್ ಕಿತ್ತು ಮಿಂಚಿದರು. ಬ್ಯಾಟಿಂಗ್ನಲ್ಲಿ ಜೆಮಿಮಾ ರೋಡ್ರಿಗಸ್ ಅಜೇಯ 20 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಇದನ್ನೂ ಓದಿ Asian Games 2023: ಚಿನ್ನದ ಖಾತೆ ತೆರೆದ ಭಾರತ; ಶೂಟಿಂಗ್ನಲ್ಲಿ ವಿಶ್ವ ದಾಖಲೆ
ಶೂಟಿಂಗ್ನಲ್ಲಿ ಚಿನ್ನ ಗೆದ್ದ ಭಾರತ
ಏಷ್ಯನ್ ಗೇಮ್ಸ್(Asian Games 2023) ಕ್ರೀಡಾಕೂಟದಲ್ಲಿ ಭಾರತ ಮೊದಲ ಚಿನ್ನದ ಪದಕವನ್ನು ಜಯಿಸಿದೆ. ಸೋಮವಾರ ನಡೆದ 10 ಮೀ. ಪುರುಷರ ರೈಫಲ್ ತಂಡವು(India 10m Men’s Rifle Team) ಚಿನ್ನದ ಪದಕಕ್ಕೆ ಗುರಿ ಇರಿಸಿತು. ಜತೆಗೆ ವಿಶ್ವ ದಾಖಲೆಯನ್ನು ನಿರ್ಮಿಸಿದ ಸಾಧನೆ ಮಾಡಿದೆ.
ಫೈನಲ್ನಲ್ಲಿ ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಬಾಳಾ ಸಾಹೇಬ್ ಪಾಟೀಲ್(Rudrankksh Patil), ಒಲಿಂಪಿಯನ್ ದಿವ್ಯಾಂಶ್ ಸಿಂಗ್ ಪನ್ವಾರ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನೊಳಗೊಂಡ ಭಾರತ ತಂಡವು 1893.7 ಅಂಕ ಸಂಪಾದಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ರೋಯಿಂಗ್ನಲ್ಲಿ ಕಂಚು
ಏತನ್ಮಧ್ಯೆ, ದಿನನ ಮತ್ತೊಂದು ಸ್ಪರ್ಧೆಯಾದ ಪುರುಷರ ನಾಲ್ಕು ರೋಯಿಂಗ್ ಸ್ಪರ್ಧೆಯಲ್ಲಿ ಭಾರತವು ಕಂಚಿನ ಪದಕವನ್ನು ಖಚಿತಪಡಿಸಿತು, ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ ಅವರು ಕ್ವಾರ್ಟೆಟ್ 6:10.81 ಸಮಯವನ್ನು ದಾಖಲಿಸಿ ಕಂಚಿನ ಪದಕ್ಕೆ ತೃಪ್ತಿಪಟ್ಟಿತು. ಭಾನುವಾರ ಭಾರತ 5 ಪದಕಗಳನ್ನು ಗೆದ್ದಿತ್ತು. ಸದ್ಯ ಭಾರತ ಒಟ್ಟು 7 ಪದಕ ಪಡೆದು ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. 1 ಚಿನ್ನ, 3 ಬೆಳ್ಳಿ, 3 ಕಂಚು ಪಡೆದಿದೆ.