ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯ(Sports Ministry) ಈಗಿರುವ ಮಾನದಂಡಗಳನ್ನು ಸಡಿಲಿದ ಕಾರಣ ಏಷ್ಯನ್ ಗೇಮ್ಸ್(Asian Games) ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಭಾರತದ ಪುರುಷರ ಮತ್ತು ಮಹಿಳಾ ಫುಟ್ಬಾಲ್ ತಂಡಕ್ಕೆ ಅವಕಾಶ ಲಭಿಸಿತ್ತು. ಇದೀಗ ಟೂರ್ನಿಯ ಫುಟ್ಬಾಲ್ ಪಂದ್ಯಗಳ ಡ್ರಾ ಪ್ರಕಟಗೊಂಡಿದೆ. ಭಾರತ ಪುರುಷರ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಚೀನಾ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಕೂಡ ಕಾಣಿಸಿಕೊಂಡಿದೆ.
ಏಷ್ಯನ್ ಗೇಮ್ಸ್ ಕ್ರೀಡಾಕೂಟ ಚೀನಾದ ಹ್ಯಾಂಗ್ಚೂ ನಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾ ಹಾಗೂ ಮ್ಯಾನ್ಮಾರ್ ತಂಡಕ್ಕಿಂತ ಮೇಲಿರುವ ಭಾರತ ತಂಡ ಅಂತಿಮ 16ರ ಸುತ್ತು ಪ್ರವೇಶಿಸುವ ನಿರೀಕ್ಷೆ ಇದೆ. ಕಳೆದ ಒಂದು ವರ್ಷಗಳಿಂದ ಭಾರತದ ಫುಟ್ಬಾಲ್ ತಂಡ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಇಚ್ಚೀಚೆಗಷ್ಟೇ ಸ್ಯಾಫ್ ಟೂರ್ನಿಯಲ್ಲಿಯೂ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫಿಫಾ ಶ್ರೇಯಾಂಕದಲ್ಲಿಯೂ ನೂರರ ಒಳಗಡೆ ಸ್ಥಾನವನ್ನು ಪಡೆದಿದೆ.
ತಂಡದ ನಾಯಕ ಸುನೀಲ್ ಚೆಟ್ರಿ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಪ್ರಸ್ತುತ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಗತಿಯ ಹಂತದಲ್ಲಿರುವ ಭಾರತೀಯ ಫುಟ್ಬಾಲ್ ತಂಡ ಏಷ್ಯಾನ್ ಗೇಮ್ಸ್ನಲ್ಲಿಯೂ ಚಿನ್ನದ ಪದಕ ಗೆಲ್ಲುವಂತಾಗಿ ಎನ್ನುವುದು ಭಾರತದ ಫುಟ್ಬಾಲ್ ಅಭಿಮಾನಿಗಳ ಆಶಯವಾಗಿದೆ.
ಇದನ್ನೂ ಓದಿ Fifa Ranking: ಉತ್ತಮ ಪ್ರಗತಿ ಸಾಧಿಸಿದ ಭಾರತೀಯ ಫುಟ್ಬಾಲ್ ತಂಡ
ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿರುವುದರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾದ ಸ್ಥಿತಿ ಭಾರತ ಫುಟ್ವಾಲ್ ತಂಡಕ್ಕೆ ಎದುರಾಗಿತ್ತು. ಆದರೆ ಇತ್ತೀನ ಪ್ರದರ್ಶನವನ್ನು ಪರಿಗಣಿಸಿ ಭಾರತ ತಂಡಗಳಿಗೆ ಅನುಮತಿ ನೀಡುವಂತೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್), ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿತ್ತು. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀನಿಯರ್ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮಾಚ್ ಅವರೂ ಮನವಿ ಮಾಡಿದ್ದರು. ಮನವಿಯನ್ನು ಗಂಭಿರವಾಗಿ ಚಿಂತಿಸಿದ ಕೇಂದ್ರ ಕ್ರೀಡಾ ಸಚಿವಾಲಯ ಅಂತಿಮವಾಗಿ ಮಾನದಂಡಗಳನ್ನು ಸಡಿಲಿಸಿ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿತು.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur) ಅವರು, ‘ಫುಟ್ಬಾಲ್ ಪ್ರೇಮಿಗಳಿಗೆ ಶುಭ ಸುದ್ದಿ. ನಮ್ಮ ಪುರುಷರ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳು ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದೆ’ ಎಂದು ಟ್ವೀಟ್ ಮಾಡುವ ಮೂಲಕ ಭಾರತ ತಂಡಕ್ಕೆ ಈ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ಲಭಿಸಿದ ವಿಚಾರವನ್ನು ಬುಧವಾರ ಬಹಿರಂಗಪಡಿಸಿದ್ದರು.