ನವದೆಹಲಿ: ಭಾರತದ ಪ್ರಖ್ಯಾತ ಓಟಗಾರ್ತಿ ಹಿಮಾ ದಾಸ್(Hima Das) ಅವರು ಮುಂಬರುವ ಏಷ್ಯನ್ ಗೇಮ್ಸ್(Asian Games) ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಭಾರತೀಯ ಆ್ಯತ್ಲೆಟಿಕ್ಸ್ ಕೋಚ್ ರಾಧಾ ಕೃಷ್ಣನ್ ನಾಯರ್(Radhakrishnan Nair) ಖಚಿತಪಡಿಸಿದ್ದಾರೆ.
ಹಿಮಾ ದಾಸ್ ಇಂದು (ಗುರುವಾರ) ಆರಂಭವಾಗಲಿರುವ ಗ್ರ್ಯಾನ್‌ಪ್ರಿ-4 ಕೂಟದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಅವರು ಸ್ನಾಯು ಸೆಳೆತ ಮತ್ತು ಬೆನ್ನು ನೋವುವೋವಿನ ಕಾರಣದಿಂದ ಹಿಂದೆ ಸರಿದಿದ್ದಾರೆ. ಅವರ ಚೇತರಿಕೆಗೆ ಹೆಚ್ಚಿನ ಸಮಯ ಬೇಕಾದ ನಿಟ್ಟಿನಲ್ಲಿ ಎಎಫ್ಐ ನಿಯಮಾವಳಿಯಂತೆ ಅವರಿಗೆ ಏಷ್ಯನ್ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಅಸಾಧ್ಯ ಎಂಬುದಾಗಿ ನಾಯರ್ ತಿಳಿಸಿದರು. ಹಿಮಾ ದಾಸ್ 2018ರ ಜಕಾರ್ತಾ ಏಷ್ಯಾಡ್‌ನ 400 ಮೀ. ರೇಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ವನಿತೆಯರ 4X400 ಮೀ. ರಿಲೇ ಹಾಗೂ 4X400 ಮೀ. ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದ ತಂಡದ ಓಟಗಾರ್ತಿಯೂ ಆಗಿದ್ದರು.
2018ರಿಂದಲೂ ಹಿಮಾ ದಾಸ್ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರು 2019ರಲ್ಲಿ ನಡೆದಿದ್ದ ವಿಶ್ವ ರಿಲೇ ಚಾಂಪಿಯನ್‌ಶಿಪ್ ತಂಡದಿಂದ ಹೊರಬಿದ್ದಿದ್ದರು. ಜತೆಗೆ ಕಳೆದ ಕೆಲ ವರ್ಷಗಳಿಂದ ಅವರ ಪ್ರದರ್ಶನವೂ ಅಷ್ಟಾಗಿ ಉತ್ತಮವಾಗಿರಲಿಲ್ಲ. ಇತ್ತೀಚೆಗೆ ನಡೆದಿದ್ದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-2(Indian Grand Prix 2) ಅಥ್ಲೆಟಿಕ್ಸ್ ಕೂಟದಲ್ಲಿ ಮಹಿಳೆಯರ 100 ಮತ್ತು 200 ಮೀಟರ್ ಓಟದಲ್ಲಿ ಅರ್ಚನಾ ಸುಸೀಂದ್ರನ್ ಅವರು ಹಿಮಾ ದಾಸ್(Hima Das) ಅವರನ್ನು ಹಿಂದಿಕ್ಕಿ ಚಿನ್ನದ ಪದಕದ ಜತೆಗೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದ್ದರು.
ಇದನ್ನೂ ಓದಿ CWG-2022 | 200ಮೀ ಓಟದಲ್ಲಿ ಫೈನಲ್ ತಲುಪಲು ವಿಫಲವಾದ ಹಿಮಾ ದಾಸ್; ಅರೆಕ್ಷಣದ ಹಿನ್ನಡೆ
ಧಿಂಗ್ ಎಕ್ಸ್‌ಪ್ರೆಸ್ ಎಂದು ಖ್ಯಾತಿ ಪಡೆದ ಹಿಮಾ ವಿಶ್ವ ಜೂನಿಯರ್ ಆತ್ಲೆಟಿಕ್ ಕ್ರೀಡಾ ಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಪಡೆದ ಕ್ರೀಡಾಪಟು ಎಂಬ ಹಿರಿಮೆಗೂ ಅವರ ಪಾತ್ರರಾಗಿದ್ದಾರೆ. ತನ್ನ 18ನೇ ವಯಸ್ಸಿನಲ್ಲಿ ಅಂಡರ್ 20 ಮಹಿಳೆಯರ 400 ಮೀಟರ್ ಓಟವನ್ನು 51.46 ಸೆಕೆಂಡ್‌ನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದರು.