ನವದೆಹಲಿ: ಬಜರಂಗ್ ಪೂನಿಯಾ(Bajrang Punia) ಹಾಗೂ ವಿನೇಶ್ ಫೋಗಾಟ್(Vinesh Phogat) ಅವರ ಏಷ್ಯನ್ ಗೇಮ್ಸ್(Asian Games Trials) ನೇರ ಆಯ್ಕೆಗೆ ತಡೆ ನೀಡಲು ದೆಹಲಿ ಹೈಕೋರ್ಟ್(Delhi High Court) ನಿರಾಕರಿಸಿದ ಹಿನ್ನೆಲೆಯಲ್ಲಿ ಯುವ ಕುಸ್ತಿಪಟುಗಳು ಸದ್ಯ ಸುಪ್ರೀಂ ಕೋರ್ಟ್(supreme court) ಮೆಟ್ಟಿಲೇರಿದ್ದಾರೆ.
ಭಾರತೀಯ ಒಲಿಂಪಿಕ್ ಸಂಸ್ಥೆಯ ಆಡ್-ಹಾಕ್ ಸಮಿತಿ ಬಜರಂಗ್ ಮತ್ತು ವಿನೇಶ್‌ಗೆ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ಕಿರಿಯ ಕುಸ್ತಿಪುಟುಗಳಾದ ಅಂತಿಮ್ ಪಂಘಲ್(Antim Panghal) ಮತ್ತು ಸುಜೀತ್ ಕಲ್ಕರ್(Sujeet Kalkal) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರು ಶನಿವಾರ ವಜಾಗೊಳಿಸಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದರು. ಇದರಿಂದ ಬಜರಂಗ್(65 ಕೆಜಿ) ಮತ್ತು ವಿನೇಶ್(53 ಕೆಜಿ) ವಿಭಾಗದಲ್ಲಿ ಏಷ್ಯಾಡ್ಗೆ ನೇರ ಪ್ರವೇಶ ಮಾಡಬಹುದಾಗಿದೆ. ಆದರೆ ಸೂಕ್ತ ನ್ಯಾಯ ಸಿಗಬೇಕೆಂದು ಕಿರಿಯ ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ. ಇಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದು ಅಂತಿಮ್ ಪಂಘಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟ್ರಯಲ್ಸ್‌ನಲ್ಲಿ ಗೆದ್ದರೂ ಅಂತಿಮ್‌ಗೆ ಅವಕಾಶವಿಲ್ಲ
ಶನಿವಾರ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಅಂತಿಮ್ ಪಂಘಲ್ ಅವರು 53 ಕೆ.ಜಿ. ವಿಭಾಗದಲ್ಲಿ ಗೆಲುವು ಕಂಡಿದ್ದಾರೆ. ಆದರೆ ಈ ವಿಭಾಗದಲ್ಲಿ ವಿನೇಶ್‌ಗೆ ನೇರ ಆಯ್ಕೆ ನೀಡಿದ್ದರಿಂದ ಅಂತಿಮ್ ಅವರನ್ನು ಏಷ್ಯಾಡ್ಗೆ ಮೀಸಲು ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂತಿಮ್, ‘ಹಲವು ಪಂದ್ಯ ಗೆದ್ದು ಆಯ್ಕೆಯಾಗಿದ್ದೇನೆ. ಹೀಗಾಗಿ ಮೀಸಲು ಆಟಗಾರ್ತಿಯಾಗಿ ನನಗೆ ಅವಕಾಶ ನೀಡಿದ್ದು ಸರಿಯಲ್ಲ. ಇದಕ್ಕೆ ಸೂಕ್ತ ನ್ಯಾಯ ಸಿಗುವವರೆಗೆ ನಾನು ಹೋರಾಡುತ್ತೇನೆ. ನಿಯಮದ ಪ್ರಕಾರ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳದವರು ಮೀಸಲು ಸ್ಥಾನದಲ್ಲಿರಬೇಕು. ಆದರೆ ಇಲ್ಲಿ ಹೀಗಾಗಿಲ್ಲ. ಇದು ನ್ಯಾಯವೇ’ ಎಂದು ಕಿಡಿಕಾರಿದ್ದಾರೆ. ಒಂದೊಮ್ಮೆ ಸುಪ್ರೀಂನಲ್ಲಿ ತೀರ್ಪು ವಿರುದ್ಧವಾಗಿ ಬಂದರೆ ಆಗ ಉಭಯ ಕುಸ್ತಿಪಟುಗಳು ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಲಿದೆ.
ಇದನ್ನೂ ಓದಿ Asian Games 2023: ಬಜರಂಗ್, ವಿನೇಶ್‌ಗೆ ನೇರಪ್ರವೇಶ: ಇಂದು ದೆಹಲಿ ಹೈಕೋರ್ಟ್ ತೀರ್ಪು
ಸಾಕ್ಷಿ ಮಲಿಕ್ ಆಕ್ಷೇಪ
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಬಜರಂಗ್ ಮತ್ತು ವಿನೇಶ್ ಜತೆಗಿದ್ದ ಸಾಕ್ಷಿ ಮಲಿಕ್ ಕೂಡ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. “ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಏಕೆಂದರೆ ಟೂರ್ನಿಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಎಲ್ಲರು ಕಠಿಣ ಶ್ರಮ ವಹಿಸಿರುತ್ತಾರೆ. ಈ ರೀತಿಯ ನಿರ್ಧಾರದಿಂದ ಅನೇಕ ಕುಸ್ತಿಪಟುಗಳ ಭವಿಷ್ಯಕ್ಕೆ ಅಡ್ಡಿಯಾಗುತ್ತದೆ’ ಎಂದು ಹೇಳಿದ್ದರು. ಜತೆಗೆ ಇದೊಂದು ಕುಸ್ತಿಪಟುಗಳ ನಡುವಿನ ಒಗ್ಗಟ್ಟು ಮುರಿಯುವ ಹುನ್ನಾರ ಎಂದಿದ್ದರು.