Site icon Vistara News

Asian Games: ಫೈನಲ್​ ಪ್ರವೇಶಿಸಿದ ಮಹಿಳಾ ಕಬಡ್ಡಿ ತಂಡ; ಸೆಮಿಯಲ್ಲಿ ಸೋಲು ಕಂಡ ಬಜರಂಗ್ ಪೂನಿಯಾ

women's kabaddi

ಹ್ಯಾಂಗ್ಝೌ: ಏಷ್ಯನ್​ ಗೇಮ್ಸ್(Asian Games)​ ಕ್ರೀಡಾಕೂಟದಲ್ಲಿ ಪದಕಗಳ ಶತಕದತ್ತ ಮುನ್ನಗ್ಗುತ್ತಿರುವ ಭಾರತದ ಕನಸು ನನಸಾಗುವ ವಿಶ್ವಾಸದಲ್ಲಿದೆ. ಶುಕ್ರವಾರ ನಡೆದ ಹಲವು ಸ್ಪರ್ಧೆಯಲ್ಲಿ ಕೆಲವರು ಪದಕ ಗೆದ್ದರೆ ಇನ್ನು ಕೆಲವರು ಫೈನಲ್​ ಪ್ರವೇಶ ಪಡೆದು ಪದಕ ಖಾತ್ರಿಪಡಿಸಿದ್ದಾರೆ. ಭಾರತದ ಮಹಿಳಾ ಕಬಡ್ಡಿ ತಂಡ ನೇಪಾಳ ವಿರುದ್ಧ ಸೆಮಿಫೈನಲ್​ನಲ್ಲಿ 61-17 ಅಂತರದಿಂದ ಗೆದ್ದು ಫೈನಲ್​ ಪ್ರವೇಶ ಪಡೆದಿದೆ. ಪುರುಷರ ತಂಡವೂ ಫೈನಲ್​ ಪ್ರವೇಶಿಸಿದೆ.

ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ಭಾರತದ ಮಹಿಳಾ ಕಬಡ್ಡಿ ಆಟಗಾರ್ತಿಯರು ನೇಪಾಳ ತಂಡದ ಚೇತರಿಕೆಗೆ ಅವಕಾಶವನ್ನೇ ನೀಡಲಿಲ್ಲ. ಅಷ್ಟರ ಮಟ್ಟಿಗೆ ಆಕ್ರಮಣಕಾರಿ ಆಟವಾಡಿದರು. ಆರಂಭದಿಂದಲೇ ಎದುರಾಳಿ ಕೋಟೆಗೆ ನುಗ್ಗಿ ಮೊದಲಾರ್ಧದಲ್ಲಿ 29–10ರ ಅಂತರದಲ್ಲಿ ಮುನ್ನಡೆ ಸಾಧಿಸಿತು. ಪೂಜಾ ಹಥ್ವಾಲಾ, ಪುಷ್ಪಾ ರಾಣಾ ಅವರ ಅತ್ಯುತ್ತಮ ರೇಡ್‌ ದಾಳಿಯನ್ನು ತಡೆದುನಿಲ್ಲಿಸಲು ನೇಪಾಳ ಪರದಾಡಿತು.

5 ಬಾರಿ ಆಲೌಟ್​

ಭಾರತ ಎದುರಾಳಿಯನ್ನು ಒಟ್ಟು ಐದು ಬಾರಿ ಆಲೌಟ್‌ ಮಾಡಿತು. ಭಾರತ ಫೈನಲ್​ನಲ್ಲಿ ಇರಾನ್‌–ಚೈನಿಸ್​ ತೈಪೆ ನಡುವಿನ ವಿಜೇತರನ್ನು ಎದುರಿಸಲಿದೆ. ಭಾರತ ಫೈನಲ್​ ಪ್ರವೇಶ ಪಡೆಯುವ ಮೂಲಕ ಆಡಿದ ಎಲ್ಲ ಟೂರ್ನಿಗಳಲ್ಲೂ ಫೈನಲ್‌ ತಲುಪಿದ ಸಾಧನೆ ಮಾಡಿತು. ಕಳೆದ ಬಾರಿ ಭಾರತ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ಈ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸುವ ಇರಾದೆಯಲ್ಲಿದೆ.

ಪಾಕ್​ ಮಣಿಸಿ ಫೈನಲ್​ ತಲುಪಿದ ಪುರುಷರ ತಂಡ

ಪುರುಷರ ಕಬಡ್ಡಿ ತಂಡ ಕೂಡ ಫೈನಲ್​ ಪ್ರವೇಶ ಪಡೆದಿದೆ. ಸೆಮಿಫೈನಲ್​ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 60-13 ಅಂಕಗಳ ಬೃಹತ್ ಅಂತರದ ವಿಜಯ ಸಾಧಿಸಿದೆ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿತ್ತು. ಹೀಗಾಗಿ ಕಂಚಿನ ಪದಕವನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಸ್ಮರಣೀಯ ಪ್ರದರ್ಶನ ನೀಡಿ ಫೈನಲ್​ಗೇರಿದೆ.

ಪಂದ್ಯದ ಆರಂಭದಲ್ಲಿ ಪಾಕಿಸ್ತಾನ ತಂಡ 4-0 ಲೀಡ್​ ಪಡೆದುಕೊಂಡು ವಿಶ್ವಾಸದಿಂದ ಮುನ್ನಡೆದಿತ್ತು. ಆದರೆ, ಭಾರತ ತಂಡ ತನ್ನ ತಂತ್ರಗಳನ್ನು ಬಳಸಿ ಪಾಕಿಸ್ತಾನ ಕೋರ್ಟ್ ಖಾಲಿ ಮಾಡಲು ಶುರು ಮಾಡಿತು. ಆ ಬಳಿಕ ಶುರು ಮಾಡಿದ ದಾಳಿಯನ್ನು ಕೊನೇ ತನಕ ನಿಲ್ಲಿಸದೇ ಗೆಲುವು ಸಾಧಿಸಿತು.

ಇದನ್ನೂ ಓದಿ Asian Games : ಕಬಡ್ಡಿಯಲ್ಲಿ ಪಾಕ್ ತಂಡಕ್ಕೆ ಹೀನಾಯ ಸೋಲುಣಿಸಿ ಫೈನಲ್​ಗೇರಿದ ಭಾರತ ತಂಡ

ಕಮಾಲ್​ ಮಾಡದ ಬಜರಂಗ್​

ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾದ ಬಜರಂಗ್ ಪೂನಿಯಾ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಇರಾನ್‌ನ ರೆಹಮಾನ್ ವಿರುದ್ಧ 8-1 ಅಂತರದಿಂದ ಸೋಲು ಕಂಡಿದ್ದಾರೆ. ಮುಂದೆ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ. ಒಂದು ವರ್ಷಗಳ ಬಳಿಕ ಅವರು ಆಡಲಿಳಿದರು. ಬಿಲ್ಲುಗಾರಿಕೆಯಲ್ಲಿ ಮಹಿಳಾ ರಿಕರ್ವ್ ತಂಡವು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವಿಯೆಟ್ನಾಂ ತಂಡವನ್ನು ಸೋಲಿಸಿತು. ಋತುರಾಜ್ ಗಾಯಕ್ವಾಡ್ ನೇತೃತ್ವದ ಪುರುಷರ ಕ್ರಿಕೆಟ್ ತಂಡವು ಏಷ್ಯನ್ ಕ್ರೀಡಾಕೂಟದ ಫೈನಲ್ಗೆ ಪ್ರವೇಶಿಸಿತು, ರಾಷ್ಟ್ರಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿತು.

Exit mobile version