ಚೆನ್ನೈ: ಇಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ(Asian Champions Trophy) ಟೂರ್ನಿಯಲ್ಲಿ ಭಾರತ(hockey india) ತನ್ನ ಅಜೇಯ ಓಟ ಮುಂದುವರಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ 3-2 ಗೋಲ್ಗಳಿಂದ ಕೊರಿಯಾವನ್ನು(India vs South Korea) ಕೆಡವಿದೆ. ಬುಧವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಬಳಗ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ಕೊರಿಯಾ ವಿರುದ್ಧದ ಗೆಲುವಿನೊಂದಿಗೆ ಭಾರತ ಮೂರು ಗೆಲುವು ಒಂದು ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ 10 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದೆ. ಮಲೇಷ್ಯಾ 9 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ಪಾಕಿಸ್ತಾನ 4ನೇ ಸ್ಥಾನದಲ್ಲಿದ್ದು ಅಂತಿಮ ಪಂದ್ಯದಲ್ಲಿ ಗೆದ್ದರೂ ಈ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿಲ್ಲ. ಇದು ಪಾಕ್ಗೆ ಕೇವಲ ಔಪಚಾರಿಕ ಪಂದ್ಯವಾಗಿದೆ.
ಮೊದಲ ಕ್ವಾರ್ಟರ್ನಲ್ಲಿ ಸಮಬಲದ ಹೋರಾಟ
ಚುರುಕಿನ ಆಟವಾಡಿದ ಭಾರತ ತಂಡಕ್ಕೆ ನೀಲಕಂಠ ಶರ್ಮಾ ಅವರು 6ನೇ ನಿಮಿಷದಲ್ಲಿ ಮುನ್ನಡೆ ತಂದಿತ್ತರು. ಆದರೆ ಎದುರಾಳಿ ತಂಡದ ಕಿಮ್ ಸುಂಗ್‌ಹ್ಯೂನ್ 12ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲ ಸಾಧಿಸಿದರು. ಇತ್ತಂಡಗಳು ಈ ಕ್ವಾರ್ಟರ್ನಲ್ಲಿ ಸಮಬಲದ ಹೋರಾಟ ಜಾರಿಯಲ್ಲಿರಿಸಿದವು. ಎರಡನೇ ಕ್ವಾರ್ಟರ್ ಬಳಿಕ ಭಾರತ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಇದನ್ನೂ ಓದಿ ಏಷ್ಯನ್ ಚಾಂಪಿಯನ್ಸ್ ಹಾಕಿ: ಚೀನಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಕಂಡ ಭಾರತ
ವಿರಾಮದ ಬಳಿ ಹಿಡಿತ ಸಾಧಿಸಿದ ಭಾರತ
ನಾಯಕ ಹರ್ಮನ್‌ಪ್ರೀತ್ ಸಿಂಗ್ ದ್ವಿತೀಯ ಗೋಲು ಹೊಡೆದು ಗೋಲಿನ ಅಂತರವನ್ನು ಹೆಚ್ಚಿಸಿದರು. ಈ ಗೋಲು 23ನೇ ನಿಮಿಷದಲ್ಲಿ ದಾಖಲಾಯಿತು. ಇದಾದ ಬಳಿಕ ಮೂರನೇ ಕ್ವಾರ್ಟರ್ನ 33ನೇ ಮಿನಷದಲ್ಲಿ ಮನ್‌ದೀಪ್ ಸಿಂಗ್ ಮತ್ತೊಂದು ಗೋಲು ಬಾರಿಸಿ ಪಂದ್ಯದಲ್ಲಿ ಸಂಪೂರ್ಣ ಮುನ್ನಡೆ ಸಾಧಿಸುವಂತೆ ಮಾಡಿದರು. ಯಾಂಗ್ ಜಿಹುನ್ (58) ಅವರು ಗೋಲು ಗಳಿಸಿ ಪೈಪೋಟಿ ನೀಡುವ ಸೂಚನೆ ನೀಡಿದರು. ಆದರೆ ಭಾರತದ ಡಿಫೆಂಡರ್ಗಳು ಆ ಬಳಿಕ ಕೊರಿಯಾ ಆಟಗಾರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಪಾಕ್, ಮಲೇಷ್ಯಾ ಜಯ
ಇದಕ್ಕೂ ಮುನ್ನ ನಡೆದ ದಿನದ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಮಲೇಷ್ಯಾ ತಂಡಗಳು ಜಯ ಸಾಧಿಸಿದ್ದವು. ಪಾಕ್ 2-1ರಿಂದ ಚೀನಾವನ್ನು ಮಣಿಸಿದರೆ, ಮಲೇಷ್ಯಾ ತಂಡ ಜಪಾನ್‌ಗೆ 3-1 ಗೋಲುಗಳಿಂದ ಸೋಲುಣಿಸಿತು. ಪಾಕ್ ವಿರುದ್ಧ ಸೋಲು ಕಂಡ ಚೀನಾ ಕೂಟದಿಂದ ಹೊರಬಿತ್ತು. ಪಾಕಿಸ್ತಾನ ಪರ ಮುಹಮ್ಮದ್ ಖಾನ್ (32ನೇ ನಿಮಿಷ), ಅರ್ಫಾಜ್(39ನೇ ನಿಮಿಷ) ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತ ತಂಡ
ಮಿಡ್‌ಫೀಲ್ಡರ್‌ಗಳು: ಹರ್ಮನ್‌ಪ್ರೀತ್ ಸಿಂಗ್(ನಾಯಕ), ಹಾರ್ದಿಕ್ ಸಿಂಗ್ (ಉಪನಾಯಕ), ಜರ್ಮನ್‌ಪ್ರೀತ್ ಸಿಂಗ್, ಸುಮಿತ್, ಜುಗರಾಜ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್. ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ ಮತ್ತು ಶಂಶೇರ್ ಸಿಂಗ್. ಫಾರ್ವರ್ಡ್‌ಗಳು: ಆಕಾಶದೀಪ್ ಸಿಂಗ್, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್, ಸುಖಜೀತ್ ಸಿಂಗ್, ಎಸ್ ಕಾರ್ತಿ. ಗೋಲ್ ಕೀಪರ್: ಪಿ.ಆರ್ ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್.