ಅಸ್ಸಾಂ: ಇಲ್ಲಿ ನಡೆದ 4ನೇ ಏಷ್ಯನ್ ಖೋ ಖೋ ಚಾಂಪಿಯನ್ಶಿಪ್ನಲ್ಲಿ(Asian Kho Kho Championships) ಭಾರತದ ಮಹಿಳಾ ಮತ್ತು ಪುರುಷರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶೇಷವೆಂದರೆ ಫೈನಲ್‌ನಲ್ಲಿ ಭಾರತೀಯ ಪುರುಷರ ಮತ್ತು ಮಹಿಳೆಯರ ತಂಡಕ್ಕೆ ನೇಪಾಳ ಎದುರಾಳಿಯಾಗಿತ್ತು.
ಫೈನಲ್‌ನಲ್ಲಿ ಭಾರತೀಯ ಪುರುಷರ ತಂಡ ನೇಪಾಳ ವಿರುದ್ಧ ಇನಿಂಗ್ಸ್ ಮತ್ತು 6 ಅಂಕಗಳಿಂದ ಮೇಲುಗೈ ಸಾಧಿಸಿತು. ಮಹಿಳೆಯರ ತಂಡ ನೆಪಾಳ ವಿರುದ್ಧ 33 ಅಂಕಗಳ ಅಂತರದಿಂದ ಗೆಲುವು ದಾಖಲಿಸಿತು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಭಾರತ ಪುರುಷರ ತಂಡ ಶ್ರೀಲಂಕಾ ವಿರುದ್ಧ 45 ಅಂಕಗಳಿಂದ ಜಯ ಸಾಧಿಸಿತ್ತು. ಎದುರಾಳಿ ನೇಪಾಳ ತಂಡ ಬಾಂಗ್ಲಾದೇಶವನ್ನು 12 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತ್ತು.
ಇದನ್ನೂ ಓದಿ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಭಾರತಕ್ಕೆ ನಾಲ್ಕು ಪದಕ ಖಾತ್ರಿ
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಪುರುಷರ ತಂಡದ ನಾಯಕ ಅಕ್ಷಯ್, “ಭಾರತ ನೆಲದಲ್ಲಿ ಪಂದ್ಯ ಗೆದ್ದಿರುವುದಕ್ಕೆ ಖುಷಿ ಇದೆ. ಕೂಟದಲ್ಲಿ ಪಾಲ್ಗೊಂಡ ಎಲ್ಲ ತಂಡಗಳು ಕೂಡ ಉತ್ತಮ ಪ್ರದರ್ಶನ ತೋರಿದೆ. ಪ್ರೇಕ್ಷಕರ ಬೆಂಬಲವನ್ನು ನಾನು ಈ ವೇಳೆ ಸ್ಮರಿಸಿಕೊಳ್ಳುತ್ತೇನೆ. ಅವರ ಬೆಂಬಲವಿದ್ದಾಗ ಮಾತ್ರ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತೆ” ಎಂದು ಹೇಳಿದರು.
ಈ ಸ್ಪರ್ಧೆಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಪಂದ್ಯಗಳನ್ನು ಖೋ ಖೋ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿತ್ತು.