Site icon Vistara News

ಏಷ್ಯನ್‌ ಒಲಿಂಪಿಕ್ಸ್‌ ಶೂಟಿಂಗ್: ಚಿನ್ನ ಗೆದ್ದ ಅಖಿಲ್ ಶೆರಾನ್, ಬೆಳ್ಳಿಗೆ ತೃಪ್ತಿಪಟ್ಟ ತೋಮಾರ್

Akhil Sheoran

ಜಕಾರ್ತಾ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ನಲ್ಲಿ(Asia Olympic Qualifiers) ಭಾರತ ಶೂಟರ್​ಗಳು ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. ಶುಕ್ರವಾರ ನಡೆದ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಅಖಿಲ್ ಶೆರಾನ್(Akhil Sheoran) ಮತ್ತು ಐಶ್ವರಿ ಪ್ರತಾಪ್‌ ಸಿಂಗ್ ತೋಮಾರ್(Aishwary Pratap Singh Tomar) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಪುರುಷರ ಫೈನಲ್‌ನಲ್ಲಿ ಶೆರಾನ್ 460.2 ಅಂಕ ಗಳಿಸಿ ಚಿನ್ನದ ಪದಕ ಗೆದ್ದರು. ಟೋಕಿಯೊ ಒಲಿಂಪಿಯನ್ ತೋಮಾರ್ 459.0 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆ ಬೆಳ್ಳಿಗೆ ತೃಪ್ತಿಪಟ್ಟರು. ಥಾಯ್ಲೆಂಡ್‌ನ ಥೊಂಗ್ಫಾಫಮ್ ವೊಂಗ್ಸುಕ್ಡಿ 448.8 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು. ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ತೋಮಾರ್ ಒಟ್ಟು 588 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರೆ, ಶೆರಾನ್ 586 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು.

ಸದ್ಯ ಭಾರತ ಇದುವರೆಗೆ 10 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಶನಿವಾರವೂ ಕೆಲ ವಿಭಾಗದಲ್ಲಿ ಭಾರತೀಯ ಶೂಟರ್​ಗಳು ಸ್ಪರ್ಧಿಸಲಿದ್ದು ಇವರ ಮೇಲು ಪದಕ ಬರವಸೆ ಇರಿಸಲಾಗಿದೆ.

ಇದನ್ನೂ ಓದಿ AFC Asian Cup: ಬಲಿಷ್ಠ ಆಸ್ಟ್ರೇಲಿಯಾದ ಸವಾಲು ಗೆದ್ದೀತೇ ಸುನೀಲ್ ಚೇಟ್ರಿ ಪಡೆ?

ಒಲಿಂಪಿಕ್ಸ್‌ ಅರ್ಹತೆ ಪಡೆದ ರಿಥಂ ಸಂಗ್ವಾನ್


ಗುರುವಾರ 25ಮೀ. ಸ್ಪೋರ್ಟ್ಸ್ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ರಿಥಂ ಸಂಗ್ವಾನ್(Rhythm Sangwan) ಕಂಚಿನ ಪದಕ ಗೆಲ್ಲುವ ಜತೆಗೆ ಪ್ಯಾರಿಸ್‌ ಒಲಿಂಪಿಕ್ಸ್(Paris Olympics 2024)​ ಕೂಟಕ್ಕೂ ಅರ್ಹತೆ ಪಡೆದಿದ್ದರು. . ಈ ಮೂಲಕ ಶೂಟಿಂಗ್‌ ಸ್ಪರ್ಧೆಯಲ್ಲಿ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ 16ನೇ ಕ್ರೀಡಾಪಟು ಎನಿಸಿಕೊಂಡಿದ್ದರು.

ಸಂಗ್ವಾನ್ ಅವರು ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವ ಮೂಲಕ ಭಾರತದ ಶೂಟಿಂಗ್​ ವಿಭಾಗದಲ್ಲಿ ಹೊಸ ಮೈಲುಗಲ್ಲೊಂದು ನಿರ್ಮಾಣವಾಯಿತು. ಇದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ಸ್​ಗೆ ಗರಿಷ್ಠ ಸಂಖ್ಯೆಯ ಶೂಟರ್​ಗಳನ್ನು ಕಳುಹಿಸಿಕೊಡಲಿದೆ. ಟೋಕಿಯೋದಲ್ಲಿ 2020ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ 15 ಸದಸ್ಯರ ಶೂಟಿಂಗ್‌ ತಂಡ ಕಳುಹಿಸಿರುವುದು ಇದುವರೆಗಿನ ದಾಖಲೆಯಾಗಿತ್ತು.

ಹರಿಯಾಣ ಮೂಲದ 20ರ ಹರೆಯದ ಸಂಗ್ವಾನ್​​ ಹ್ಯಾಂಗ್‌ಝೂ ಏಷ್ಯನ್‌ ಗೇಮ್ಸ್‌ನ 25 ಮೀ. ಸ್ಪೋರ್ಟ್ಸ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ತಂಡದ ಭಾಗವಾಗಿದ್ದರು. ಜಕಾರ್ತಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ರಿಥಂ ಅವರಿಗಿಂತ ಮೊದಲು ಭಾತತದ ಇಶಾ ಸಿಂಗ್‌ ಮತ್ತು ವರುಣ್‌ ತೋಮರ್‌ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. 

Exit mobile version