ಗುವಾಹಟಿ : ಜನವರಿ 10ರಂದು ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ರಾಜ್ಕೋಟ್ನಲ್ಲಿ ಶನಿವಾರ ನಡೆಯುವ ಟಿ20 ಸರಣಿಯ ಕೊನೇ ಪಂದ್ಯ ಮುಕ್ತಾಯಗೊಂಡ ಬಳಿಕ ಲಂಕಾ ಬಳಗ ಅಸ್ಸಾಮ್ನ ರಾಜಧಾನಿಗೆ ಪ್ರಯಾಣ ಬೆಳೆಸಲಿದೆ. ಜತೆಗೆ ಭಾರತ ತಂಡವೂ ಅಲ್ಲಿಗೆ ಹೋಗುವ ವಿಮಾನ ಏರಲಿದೆ. ಪಂದ್ಯದ ದಿನ ಹತ್ತಿರ ಬರುತ್ತಿದ್ದಂತೆ ಅಸ್ಸಾಂ ಕ್ರಿಕೆಟ್ ಸಂಸ್ಥೆಗೆ ಹಾವಿನ ಭಯ ಕಾಡುತ್ತಿದೆ. ಅದರ ನಿಯಂತ್ರಣಕ್ಕೆ ಬಗೆಬಗೆಯ ಯೋಜನೆಗಳನ್ನು ರೂಪಿಸುತ್ತಿದೆ.
ಕಳೆದ ಬಾರಿ ಗುವಾಹಟಿಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ20 ಪಂದ್ಯ ನಡೆದಾಗ ಹಾವೊಂದು ಮೈದಾನದ ಹುಲ್ಲು ಹಾಸಿನ ಮೇಲೆ ಹರಿದಾಡಿಕೊಂಡು ಹೋಗಿತ್ತು. ಹಾವಿನ ಸರಿದಾಟ ನೇರ ಪ್ರಸಾರದ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಅಲ್ಲಿಂದ ಫೀಲ್ಡ್ ಅಂಪೈರ್ಗಳಿಗೆ ಮಾಹಿತಿ ನೀಡಲಾಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಆಟಗಾರರು ಹಾಗೂ ಪ್ರೇಕ್ಷಕರು ಆತಂಕಕ್ಕೆ ಬಿದ್ದಿದ್ದರು. ತಮ್ಮ ಕಾಲ ಕೆಳಗೆ ಹಾವು ಇದೆಯೇ ಎಂದು ಪದೇ ಪದೇ ನೋಡುವಂತೆ ಮಾಡಿತ್ತು ಈ ಸರಿಸೃಪದ ಪ್ರವೇಶ. ಅಂತಿಮವಾಗಿ ಉರಗ ತಜ್ಱರು ಬಂದು ಹಾವನ್ನು ಕಾಪಾಡಿದ್ದರು.
ಇಷ್ಟೆಲ್ಲ ಘಟನೆಗಳು ನಡೆಯವಾಗ 10 ನಿಮಿಷದ ಆಟಕ್ಕೆ ಅಡಚಣೆ ಉಂಟಾಗಿತ್ತು. ಈ ಪರಿಸ್ಥಿತಿ ಮತ್ತೆ ಎದುರಾದರೆ ಏನು ಮಾಡುವುದು ಎಂಬುದು ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಯೋಚನೆ. ಸದ್ಯ ಸರ್ಕಾರೇತರ ಸಂಸ್ಥೆ (ಎನ್ಜಿಒ) ಜತೆ ಅಸ್ಸಾಮ್ ಕ್ರಿಕೆಟ್ ಮಾತುಕತೆ ಮಾಡಿದೆ. ಹಾವು ಬರದಂತೆ ನೋಡಿಕೊಳ್ಳುವುದಕ್ಕೆ ತಂತ್ರಗಳನ್ನು ಹೂಡಲಾಗಿದೆ. ರಾಸಾಯನಿಕವೊಂದನ್ನು ಮೈದಾನಕ್ಕೆ ಹಾಗೂ ಪ್ರೇಕ್ಷಕರ ಗ್ಯಾಲರಿಗೆ ಸಿಂಪಡಿಸಿ ಹಾವುಗಳು ಅಲ್ಲಿಗೆ ಸುಳಿಯದಂತೆ ನೋಡಿಕೊಳ್ಳುವುದಾಗಿ ಎನ್ಜಿಒ ಭರವಸೆ ಕೊಟ್ಟಿದೆಯಂತೆ.
ಲೈಟ್ ರಿಪೇರಿ
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಫ್ಲಡ್ ಲೈಟ್ ಕೂಡ ಕೈ ಕೊಟ್ಟಿತ್ತು. ಸ್ಟೇಡಿಯಮ್ನ ಒಂದು ಬದಿಯ ದೀಪಗಳು ಸಂಪೂರ್ಣವಾಗಿ ಆಫ್ ಆಗಿತ್ತು. ಸುಮಾರು ಹೊತ್ತು ಕಾದ ಬಳಿಕ ರಿಪೇರಿ ಮಾಡಲಾಗಿತ್ತು. ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಅಸ್ಸಾಮ್ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.
ಇದನ್ನೂ ಓದಿ | IND VS SL | ಭಾರತಕ್ಕೆ ಬಂದ ಶ್ರೀಲಂಕಾ ಕ್ರಿಕೆಟ್ ತಂಡ; ಜ.03ಕ್ಕೆ ಮೊದಲ ಟಿ20 ಪಂದ್ಯ