ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯೆಂದರೆ ವಿವಾದದ ಗೂಡು. ಕ್ರಿಕೆಟ್ ತಂಡದಲ್ಲೂ ಜಗಳ, ದ್ವೇಷ ಮಾಮೂಲಿ. ಎಲ್ಲದಕ್ಕಿಂತ ದ್ವೇಷ ಸಾಧನೆಗಾಗಿ ಅಲ್ಲಿ ಕೊಲೆ ಯತ್ನವೂ ನಡೆಯುತ್ತದೆ. ಅಂಥದ್ದೊಂದು ದೇಷದ ಬಲೆಗೆ ಈಡಾಗಿ ಹಾಸಿಗೆ ಹಿಡಿದ ಕತೆಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ನಜೀರ್ ಹೇಳಿದ್ದಾರೆ. ತಮಗೆ ನಿಧಾನ ವಿಷ (Slow Poison) ಉಣಿಸಿ ಕೊಲೆ ಮಾಡಲು ಯತ್ನಿಸಿದ ವಿಷಯವನ್ನು ಬಹಿರಂಗ ಮಾಡಿದ್ದಾರೆ. ಯಾರು ಆ ರೀತಿ ಮಾಡಿದ್ದಾರೆ ಎಂಬುದನ್ನು ಬಹಿರಂಗ ಮಾಡಿಲ್ಲ. ಆದರೆ, ಕಷ್ಟಕಾಲದಲ್ಲಿ ತಮಗೆ ನೆರವಾದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿಯನ್ನು ಹೊಗಳಿದ್ದಾರೆ.
ಇಮ್ರಾನ್ ನಜೀರ್ಗೆ ಕ್ರಿಕೆಟ್ ತಂಡದಲ್ಲಿ ಇರುವ ಅವಧಿಯಲ್ಲಿ ನಿರಂತರವಾಗಿ ಸ್ವಲ್ಪ ಸ್ವಲ್ಪನೇ ಪಾದರಸ ಹಾಕಿದ್ದಾರೆ. ಪಾದರಸ ನಿಧಾನ ವಿಷವಾಗಿದ್ದು ಮನುಷ್ಯನ ದೇಹದ ಗಂಟುಗಳಲ್ಲಿ ಸೇರಿಕೊಂಡು ದುರ್ಬಲಗೊಳಿಸುತ್ತದೆ. ಅಂತೆಯೇ ನಜೀರ್ ಕೂಡ ಪಾದರಸ ದೇಹಕ್ಕೆ ಸೇರಿಕೊಂಡು ಸಂಪೂರ್ಣವಾಗಿ ಅಸ್ವಸ್ಥರಾಗಿದ್ದಾರೆ. ಎದ್ದೇಳಲು ಸಾಧ್ಯವಾಗದೇ ಹಾಸಿಗೆ ಹಿಡಿದ್ದರು.
ಸತತವಾಗಿ ಪಾದರಸ ದೇಹಕ್ಕೆ ಸೇರಿಕೊಂಡ ಕಾರಣ ಆದ ಸಮಸ್ಯೆಯನ್ನು ನಜೀರ್ ವಿವರಿಸಿದ್ದಾರೆ. ತಮಗೆ ಬೆರಳುಗಳನ್ನು ಬಗ್ಗಿಸಲೂ ಆಗುತ್ತಿರಲಿಲ್ಲ ಎಂದು ಅವರು ಹೇಳಿಕೊಂಡು ತಮ್ಮ ಪಾಡನ್ನು ವಿವರಿಸಿದ್ದಾರೆ.
ನಾನು ಎಮ್ಆರ್ಐ ಸೇರಿದಂತೆ ನಾನಾ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಪಾದರಸ ದೇಹ ಸೇರಿಕೊಂಡಿದ್ದು ಗೊತ್ತಾಗಿದೆ. 10 ವರ್ಷಗಳಿಂದ ನನಗೆ ಪಾದರಸವನ್ನು ಹಾಕಲಾಗಿತ್ತು. ಅದರಿಂದಾಗಿ ನನ್ನ ದೇಹದ ಗಂಟುಗಳಿಗೆ ಸಂಪೂರ್ಣ ಹಾನಿಯಾಗಿತ್ತು. 6ರಿಂದ 7 ವರ್ಷ ಹಾಸಿಗೆ ಹಿಡಿದು ನರಳಾಡಿದೆ ಎಂದು ನಜೀರ್ ತಮ್ಮ ಕತೆಯನ್ನು ಹೇಳಿಕೊಂಡಿದ್ದಾರೆ.
ಇಮ್ರಾನ್ ನಜೀರ್ ಪಾಕಿಸ್ತಾನ ಕ್ರಿಕೆಟ್ ತಂಡ ಪರವಾಗಿ 1999ರಿಂದ 2012ರವರೆಗೆ ಆಡಿದ್ದರು. 8 ಟೆಸ್ಟ್ ಹಾಗೂ 79 ಒಡಿಐನಲ್ಲಿ ಅವರು ತಂಡದ ಭಾಗವಾಗಿದ್ದರು. 427 ಟೆಸ್ಟ್ ರನ್ ಹಾಗೂ 1895 ಏಕ ದಿನ ರನ್ಗಳನ್ನು ಅವರು ಬಾರಿಸಿದ್ದಾರೆ. 2007ರ ವಿಶ್ವ ಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 160 ರನ್ ಬಾರಿಸಿದ್ದರು. ಇದು ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿಯೇ ವಿಶ್ವ ಕಪ್ನಲ್ಲಿ ಬಾರಿಸಿದ ಗರಿಷ್ಠ ವೈಯಕ್ತಿಕ ರನ್.
ನಿರಂತರವಾಗಿ ವಿಷ ಹಾಕಿದ ಕಾರಣ ನನಗೆ ಎದ್ದೇಳಲು ಕೂಡ ಆಗಲಿಲ್ಲ. ಚಿಕಿತ್ಸೆ ಪಡೆಯಲು ಆರಂಭಿಸಿದ ಬಳಿಕ ಸ್ವಲ್ಪ ಸ್ವಲ್ಪವೇ ಸುಧಾರಿಸಿಕೊಳ್ಳುತ್ತಿದ್ದೇನೆ. ಹಾಗೆಂದು ವಿಷ ಹಾಕಿದವರಿಗೆ ನಾನು ಕೇಡು ಬಯಸಿಲ್ಲ. ಅದಕ್ಕಿಂತ ನನ್ನ ಜೀವ ಉಳಿಸಿದವರಿಗೆ ಧನ್ಯವಾದ ಹೇಳುತ್ತಿದ್ದೇನೆ ಎಂದು ನಜೀರ್ ನುಡಿದಿದ್ದಾರೆ.
ಇದನ್ನೂ ಓದಿ : World Cup 2023: ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್ ಆರಂಭ; ನವೆಂಬರ್ 19ಕ್ಕೆ ಫೈನಲ್!
ಕ್ರಿಕೆಟ್ಗೆ ನಿವೃತ್ತಿ ಹೇಳಿದರೂ ಚಿಕಿತ್ಸೆಗಾಗಿ ನಜೀರ್ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರು. ಹೀಗಾಗಿ ಕೊನೇ ಹಂತದಲ್ಲಿ ಅವರೂ ಹಣ ಖಾಲಿಯಾಗಿ ಸಮಸ್ಯೆ ಎದುರಿಸಿದ್ದರು. ಈ ವೇಳೆ ಪಾಕಿಸ್ತಾನದ ತಂಡದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ನೆರವಿಗೆ ಬಂದಿದ್ದರು. ಅವರು ಚಿಕಿತ್ಸೆಗೆ ನೆರವು ಕೊಟ್ಟಿದ್ದರು.