Site icon Vistara News

ತಾಯಿ ಕುಸಿದು ಬಿದ್ದ ಕೂಡಲೇ ಅಶ್ವಿನ್​ ನೆರವಿಗೆ ಬಂದದ್ದು ಚೇತೇಶ್ವರ ಪೂಜಾರ

R Ashwin

ಚೆನ್ನೈ: ಇಂಗ್ಲೆಂಡ್(IND vs ENG) ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್(R Ashwin) ಅವರು ತಮ್ಮ ತಾಯಿಯ ಅನಾರೋಗ್ಯದ ಕಾರಣದಿಂದ ಪಂದ್ಯವನ್ನು ಅರ್ಧದಲ್ಲೇ ಮೊಟಕುಗೊಳಿಸಿ ದಿಢೀರ್​ ಆಗಿ ತವರಿಗೆ ಮರಳಿದ್ದರು. ಅಂತಿಮ ದಿನದಾಟಕ್ಕೆ ಮತ್ತೆ ತಂಡ ಸೇರಿದ್ದರು. ಅಂದಿನ ಈ ಘಟನೆಯನ್ನು ಅಶ್ವಿನ್ ಪತ್ನಿ ಪ್ರೀತಿ(Ashwin’s Wife Prithi) ಈಗ ತೆರೆದಿಟ್ಟಿದ್ದಾರೆ.

ಅಶ್ವಿನ್​ ಅವರಿಗೆ ಧರ್ಮಶಾಲಾದಲ್ಲಿ ನಡೆಯುವ ಟೆಸ್ಟ್​ ಪಂದ್ಯ ಶತಕದ ಟೆಸ್ಟ್ ಪಂದ್ಯವಾಗಲಿದೆ. ಈ ಕುರಿತು ಆಂಗ್ಲ ಮಾಧ‍್ಯಮವೊಂದರ ಜತೆ ಮಾತನಾಡುವ ವೇಳೆ ಅಶ್ವಿನ್ ಪತ್ನಿ ತಾಯಿಯ ಅನಾರೋಗ್ಯದ ಘಟನೆಯನ್ನು ವಿವರಿಸಿದರು. ‘ಮೂರನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 500 ವಿಕೆಟ್​ಗಳ ದಾಖಲೆ ಮಾಡಿದ್ದನ್ನು ಕಂಡು ನಾವೆಲ್ಲರು ಮನೆಯಲ್ಲಿ ಸಂಭ್ರಮಿಸುತ್ತಿದ್ದೆವು, ಈ ವೇಳೆ ಅಶ್ವಿನ್ ತಾಯಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಮ್ಮೆಲ್ಲರ ಸಂಭ್ರಮ ಕ್ಷಣ ಮಾತ್ರದಲ್ಲಿ ಇಲ್ಲದಂತಾಯಿತು. ಎಲ್ಲರು ಒಂದು ಕ್ಷಣ ಆತಂಕಕ್ಕೆ ಒಳಗಾದೆವು’ ಎಂದರು.

ನೆರವಾದ ಪೂಜಾರ


ಸಂಜೆ ಮಕ್ಕಳು ಶಾಲೆಯಿಂದ ಬಂದ ಕೆಲವೇ ಕ್ಷಣಗಳಲ್ಲಿ ಅಶ್ವಿನ್ 500 ವಿಕೆಟ್ ಕಬಳಿಸಿದ್ದರು. ಈ ಕ್ಷಣವನ್ನು ಅತ್ತೆಯೂ ಕೂಡ ಟಿವಿಯಲ್ಲಿ ನೋಡುತ್ತಿದ್ದರು. ಮೊಮ್ಮಕ್ಕಳ ಜತೆಗೆ ಸಂಭ್ರಮಾಚರಣೆ ಮಾಡುತ್ತಿದ್ದರು. ಸಡನ್ ಆಗಿ ಕಿರುಚಿಕೊಂಡು ಕುಸಿದು ಬಿದ್ದರು. ನಮಗೆಲ್ಲಾ ಗಾಬರಿಯಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದೆವು. ಮೊದಲು ನಾವು ಈ ವಿಚಾರವನ್ನು ಅಶ್ವಿನ್​ಗೆ ಹೇಳುವುದು ಬೇಡ ಎಂದುಕೊಂಡಿದ್ದೆವು. ಏಕೆಂದರೆ ರಾಜಕೋಟ್​ನಿಂದ ಚೆನ್ನೈಗೆ ಪ್ರಯಾಣಿಸಲು ಸರಿಯಾದ ವಿಮಾನ ವ್ಯವಸ್ಥೆಯಿರಲಿಲ್ಲ. ಆದರೆ, ಅತ್ತೆಯ ಸ್ಕ್ಯಾನಿಂಗ್ ವರದಿಗಳನ್ನು ನೋಡಿದ ಮೇಲೆ ವೈದ್ಯರು ಅಶ್ವಿನ್ ಬಂದರೆ ಒಳ್ಳೆಯದು ಎಂದರು.

ಈ ವೇಳೆ ನಾನು ಮೊದಲು ಚೇತೇಶ್ವರ ಪೂಜಾರಗೆ ಕರೆ ಮಾಡಿ ನಡೆದ ಎಲ್ಲಾ ವಿಚಾರ ತಿಳಿಸಿದೆ. ಪೂಜಾರ ಅವರು ರಾಜ್ ಕೋಟ್ ನವರೇ ಆಗಿದ್ದರಿಂದ ನಮಗೆ ತಕ್ಷಣ ನೆರವು ಮಾಡಿದರು. ಪೂಜಾರ ಮತ್ತು ಕುಟುಂಬಕ್ಕೆ ನಾವು ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ಪೂಜಾರ ಅವರು ಎಲ್ಲ ಸಿದ್ಧತೆ ಮಾಡಿದ ಬಳಿಕ ನಾನು ಅಶ್ವಿನ್​ಗೆ ಕರೆ ಮಾಡಿದೆ. ನನ್ನ ಮಾತು ಕೇಳಿ ಅಶ್ವಿನ್​ಗೆ ತೀವ್ರ ಆಘಾತವಾಗಿತ್ತು. ಅಶ್ವಿನ್​ ಇಲ್ಲಿಗೆ ತಲುಪುವವರೆಗೂ ಪೂಜಾರ ನಮ್ಮ ಸಂಪರ್ಕದಲ್ಲಿದ್ದರು ಎಂದು ಪೂಜಾರ ನೆರವನ್ನು ನೆನಪಿಸಿಕೊಂಡರು.

ಇದನ್ನೂ ಓದಿ IND vs ENG 5th Test: ಭಾರತವನ್ನು ಮಣಿಸಲು ದಲೈ ಲಾಮಾ ಆಶೀರ್ವಾದ ಪಡೆದ ಇಂಗ್ಲೆಂಡ್​ ಕ್ರಿಕೆಟಿಗರು

ಅಶ್ವಿನ್​ಗೆ ವಿಶೇಷ ಗೌರವ


ಧರ್ಮಶಾಲಾ ಟೆಸ್ಟ್​ ಅಶ್ವಿನ್​ಗೆ 100ನೇ ಟೆಸ್ಟ್‌ ಪಂದ್ಯವಾಗಿದೆ. ಈ ಸಾಧನೆ ಮಾಡಿ 14ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಆರಂಭಕ್ಕೂ ಮುನ್ನ ವಿಶೇಷ ಗೌರವ ಸೂಚಿಸುವ ಕಾರ್ಯಕ್ರಮವೊಂದನ್ನು ಬಿಸಿಸಿಐ ಏರ್ಪಡಿಸಿದೆ. ನಾಯಕ ರೋಹಿತ್‌ ಶರ್ಮ ಅವರು ಶತಕದ ಟೆಸ್ಟ್​ ಸಾಧಕ ಅಶ್ವಿ‌ನ್‌ ಅವರಿಗೆ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್‌ ತಂಡದ ಭಾಗವಾಗಿರುವ ಅಶ್ವಿ‌ನ್‌ ಸದ್ಯ 99* ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರನೇ ಟೆಸ್ಟ್​ ಪಂದ್ಯದಲ್ಲಿ ಅವರು 500 ಟೆಸ್ಟ್​ ವಿಕೆಟ್​ಗಳನ್ನು ಪೂರ್ತಿಗೊಳಿಸಿದ ಸಾಧನೆ ಕೂಡ ಮಾಡಿದ್ದರು. ಸದ್ಯ ಅವರ ಬತ್ತಳಿಕೆಯಲ್ಲಿ 507 ವಿಕೆಟ್​ಗಳಿವೆ. ಅತ್ಯಧಿಕ 35 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ ಭಾರತೀಯ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 8 ಬಾರಿ 10ಕ್ಕಿಂತ ಅಧಿಕ ವಿಕೆಟ್​ ಕಿತ್ತ ದಾಖಲೆ ಕೂಡ ಇವರದ್ದಾಗಿದೆ.

Exit mobile version