Site icon Vistara News

AUS vs ENG: ಆಸೀಸ್​ ಬ್ಯಾಟಿಂಗ್​ ಆರ್ಭಟಕ್ಕೆ ಮಣಿದ ಹಾಲಿ ಚಾಂಪಿಯನ್​ ಇಂಗ್ಲೆಂಡ್​

AUS vs ENG

AUS vs ENG: Australia won by 36 runs

ಬಾರ್ಬಡಾಸ್​: ಶನಿವಾರ ತಡರಾತ್ರಿ ನಡೆದ ‘ಬಿ’ ಗುಂಪಿನ ಟಿ20 ವಿಶ್ವಕಪ್(T20 World Cup 2024) ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್(AUS vs ENG)​ ತಂಡ ಆಸ್ಟ್ರೇಲಿಯಾ(Australia vs England) ವಿರುದ್ಧ 36 ರನ್​ಗಳ ಸೋಲಿಗೆ ತುತ್ತಾಯಿತು. ಆಸೀಸ್​ ಪರ 2 ವಿಕೆಟ್​ ಕಿತ್ತ ಸ್ಪಿನ್ನರ್​ ಆ್ಯಡಂ ಜಂಪಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಆಸೀಸ್​​ಗೆ ಒಲಿದ ಸತತ ಎರಡನೇ ಗೆಲುವು.

ಇಲ್ಲಿನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ಸಂಘಟಿತ ಬ್ಯಾಟಿಂಗ್​ ನಡೆಸಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 201 ರನ್​ ಬಾರಿಸಿತು. ಇದು ಈ ಆವೃತ್ತಿಯಲ್ಲಿ 200ರ ಗಡಿ ದಾಟಿದ ಮೊದಲ ಪಂದ್ಯ. ಬೃಹತ್​ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಗೆಲುವಿ ಸಾಧಿಸುವಲ್ಲಿ ವಿಫಲವಾಯಿತು. 6 ವಿಕೆಟ್​ಗೆ 165 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಚೇಸಿಂಗ್​ ವೇಳೆ ಆರಂಭಿ ಆಟಗಾರರಾದ ಫಿಲ್ ಸಾಲ್ಟ್​ ಮತ್ತು ನಾಯಕ ಜಾಸ್​ ಬಟ್ಲರ್​ ಬಿರುಸಿನ ಬ್ಯಾಟಿಂಗ್​ ಮೂಲಕ ಓವರ್​ಗೆ 10ರ ಸರಾಸರಿಯಲ್ಲಿ ರನ್​ ಗಳಿಸುತ್ತಾ ಉತ್ತಮ ಆರಂಭ ಒದಗಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೂ ಆ್ಯಡಂ ಜಂಪಾ ಬೇರ್ಪಡಿಸುವಲ್ಲಿ ಯಶಸ್ಸು ಕಂಡರು. ಉಭಯ ಆಟಗಾರರ ವಿಕೆಟ್​ ಕಿತ್ತು ಆಸೀಸ್​ಗೆ ಮುನ್ನಡೆ ತಂದುಕೊಟ್ಟರು. ಸಾಲ್ಟ್ ಮತ್ತು ಬಟ್ಲರ್​ ಮೊದಲ ವಿಕೆಟ್​ಗೆ 73 ರನ್​ ರಾಶಿ ಹಾಕಿತು. ಬಟ್ಲರ್​ 42 ರನ್​ ಗಳಿಸಿದರೆ, ಸಾಲ್ಟ್​ 37 ರನ್​ ಗಳಿಸಿದರು.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು?

ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಬಂದ ವಿಲ್​ ಜಾಕ್ಸ್​(10),ಜಾನಿ ಬೇರ್​ಸ್ಟೋ(7), ಬ್ಯಾಟಿಂಗ್​ ವೈಫಲ್ಯ ಕಾಣುವ ಜತೆಗೆ ಹಲವು ಬಾಲ್​ ತಿಂದರು. ಇದು ಸೋಲಿಗೆ ಪ್ರಮುಖ ಕಾರಣವಾಯಿತು. ಹ್ಯಾರಿ ಬ್ರೂಕ್​ ಅಜೇಯ 20 ಮತ್ತು ಮೊಯಿನ್​ ಅಲಿ 25 ರನ್​ ಬಾರಿಸಿದರು. ಆಸೀಸ್​ ಪರ ಜಾಂಪಾ ಮತ್ತು ಕಮಿನ್ಸ್​ ತಲಾ 2 ವಿಕೆಟ್​ ಕಿತ್ತರು.

ಆಸೀಸ್​ ಸಂಘಟಿತ ಬ್ಯಾಟಿಂಗ್​ ಪ್ರದರ್ಶನ


ಮೊದಲು ಬ್ಯಾಟಿಂಗ್​ ನಡೆಸಿದ ಆಸೀಸ್​ ಪರ ಅಗ್ರ 5 ಬ್ಯಾಟರ್​ಗಳು ಕೂಡ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಈ ಪೈಕಿ ನಾಲ್ಕು ಮಂದಿ ಬ್ಯಾಟರ್​ಗಳು 30 ಪ್ಲಸ್​ ಮೊತ್ತ ಕಲೆಹಾಕಿ ತಂಡದ ಬೃಹತ್​ ಮೊತ್ತಕ್ಕೆ ನೆರವಾದರು. ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​ ಮತ್ತು ಡೇವಿಡ್​ ವಾರ್ನರ್​ ಸೇರಿಕೊಂಡು ಮೊದಲ ವಿಕೆಟ್​ಗೆ ಕೇವಲ 4.6 ಓವರ್​ಗಳಲ್ಲಿ 70 ರನ್​ ಒಟ್ಟುಗೂಡಿಸಿದರು. ಹೆಡ್​ 18 ಎಸೆತಗಳಿಂದ 34 ರನ್(2 ಬೌಂಡರಿ, 3 ಸಿಕ್ಸರ್​)​, ಡೇವಿಡ್​ ವಾರ್ನರ್​ 39 ರನ್​(4 ಸಿಕ್ಸರ್​, 2 ಬೌಂಡರಿ), ನಾಯಕ ಮಿಚೆಲ್​ ಮಾರ್ಷ್​ 35 ರನ್​ (ತಲಾ 2 ಸಿಕ್ಸರ್​ ಮತ್ತು ಬೌಂಡರಿ), ಮಾರ್ಕಸ್​ ಸ್ಟೋಯಿನಿಸ್ ಕೇವಲ 17 ಎಸೆತಗಳಿಂದ​ 30 ರನ್ ಬಾರಿಸಿದರು. ಕಳೆದ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಗ್ಲೆನ್​ ಮ್ಯಾಕ್ಸ್​ವೆಲ್​ ಈ ಪಂದ್ಯದಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್​ ಬಾರಿಸಿ 28 ರನ್​ ಗಳಿಸಿದರು.​

Exit mobile version