Site icon Vistara News

AUS vs ENG: ಬಲಿಷ್ಠ ಆಸೀಸ್​ ಮಣಿಸಿ ಸೆಮಿ ರೇಸ್​ನಲ್ಲಿ ಉಳಿಯುವುದೇ ಇಂಗ್ಲೆಂಡ್​?

England vs Australia

ಅಹಮದಾಬಾದ್​: ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು 5 ಬಾರಿಯ ಚಾಂಪಿಯನ್​ ಆಸ್ಟ್ರೇಲಿಯಾ ಶನಿವಾರದ ವಿಶ್ವಕಪ್​ನ ದ್ವಿತೀಯ ಪಂದ್ಯದಲ್ಲಿ ಸೆಣಸಾಡಲಿದೆ. ಇತ್ತಂಡಗಳ ಈ ಕಾದಾಟಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಅಣಿಯಾಗಿದೆ. ಇಂಗ್ಲೆಂಡ್​ ಈ ಪಂದ್ಯದಲ್ಲಿ ಸೋತರೆ ಅಧಿಕೃತವಾಗಿ ಸೆಮಿ ಫೈನಲ್​ ರೇಸ್​ನಿಂದ ಹೊರಬೀಳಲಿದೆ. ಹೀಗಾಗಿ ಬಟ್ಲರ್​ ಪಡೆ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸಬೇಕಿದೆ.

ಇಂಗ್ಲೆಂಡ್​ಗೆ ಗೆಲುವು ಅತ್ಯಗತ್ಯ

ಕೊನೆಯ ಸ್ಥಾನಿ ಇಂಗ್ಲೆಂಡ್​ ತಂಡ ತನ್ನ ಸೆಮಿಫೈನಲ್​ ಆಸೆಯನ್ನು ಜೀವಂತಿರಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದೊಮ್ಮೆ ಇಂಗ್ಲೆಂಡ್​ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಅತ್ತ 8 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿರುವ ಆಸೀಸ್​ಗೂ ಕೂಡ ಗೆಲುವು ಅನಿವಾರ್ಯ. ಒಟ್ಟಾರೆ ಈ ಪಂದ್ಯ ಇತ್ತಂಡಗಳಿಗೂ ಮಹತ್ವದಾಗಿದ್ದು ಯಾರಿಗೆ ಗೆಲುವಿನ ಅದೃಷ್ಠ ಸಿಗಲಿದೆ ಎನ್ನುವುದು ಪಂದ್ಯದ ಕೌತುಕ.

ಇಂಗ್ಲೆಂಡ್​ ತಂಡದ ಸೆಮಿ ಲೆಕ್ಕಾಚಾರ

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸದ್ಯ ಆಡಿದ 6 ಪಂದ್ಯಗಳಲ್ಲಿ 5 ಸೋಲು ಕಂಡು 2 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಬಟ್ಲರ್​ ಪಡೆಗೆ ಮೂರು ಪಂದ್ಯಗಳು ಬಾಕಿ ಉಳಿದಿವೆ. ಎದುರಾಳಿಗಳು ನೆದರ್ಲೆಂಡ್ಸ್​​, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ. ಈ ಮೂರು ಪಂದ್ಯಗಳನ್ನು ಇಂಗ್ಲೆಂಡ್​ ಗೆದ್ದರೆ 8 ಅಂಕ ಸಂಪಾದಿಸಿ, ಉಳಿದಿರುವ ಮೂರು ಸ್ಥಾನಗಳ ಪೈಕಿ ಯಾವುದಾದದರು ಒಂದು ಸ್ಥಾನ ಪಡೆದು ಸೆಮಿಫೈನಲ್​ ಪ್ರವೇಶಿಸಬಹುದು. ಆದರೆ ಇಲ್ಲಿಯೂ ಒಂದು ಲೆಕ್ಕಾಚಾರವಿದೆ.

ಸದ್ಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಉಳಿದಿರುವ ಮೂರು ಪಂದ್ಯಗಳಲ್ಲಿ ಸೋಲು ಕಾಣಬೇಕು. ಆಗ ಈ ಮೂರು ಸೋಲಿನಿಂದಾಗಿ ಉಭಯ ತಂಡಗಳು ಈಗಿರುವ 8 ಅಂಕದಲ್ಲೇ ಉಳಿಯಲಿದೆ. ಆಗ ರನ್​ರೇಟ್​ ಆಧಾರದಲ್ಲಿ ಈ ಅದೃಷ್ಟ ಇಂಗ್ಲೆಂಡ್​ಗೆ ಸಿಗಬಹುದು. ಏಕೆಂದರೆ ಸೋಲು ಕಂಡ ಕಾರಣ ಕಿವೀಸ್​ ಮತ್ತು ಆಸೀಸ್​ ತಂಡದ ರನ್​ ರೇಟ್​ ಕುಸಿತ ಕಂಡಿರುತ್ತದೆ. ಸತತ ಗೆಲುವು ಸಾಧಿಸಿದ ಇಂಗ್ಲೆಂಡ್​ನ ರನ್​ರೇಟ್​ ಪ್ಲಸ್​ ಆಗಿರುತ್ತದೆ. ಹೀಗಾಗಿ ಇಂಗ್ಲೆಂಡ್​ಗೆ ಈ ಲಾಭ ಸಿಗಲಿದೆ. ಎಲ್ಲದ್ದಕ್ಕೂ ಇಂಗ್ಲೆಂಡ್​ ಗೆಲವು ಕಾಣಬೇಕು.

ವಿಶ್ವಕಪ್​ ಮುಖಾಮುಖಿ

ಕ್ರಿಕೆಟ್​ನ ಬದ್ಧ ಎದುರಾಳಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೆ ವಿಶ್ವಕಪ್​ನಲ್ಲಿ 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆಸ್ಟ್ರೇಲಿಯಾ 6 ಪಂದ್ಯಗಳನ್ನು ಗೆದ್ದರೆ, ಇಂಗ್ಲೆಂಡ್​ 3 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಕಳೆದ 2019ರ ವಿಶ್ವಕಪ್​ನಲ್ಲಿ ಇತ್ತಂಡಗಳು 2 ಬಾರಿ ಮುಖಾಮುಖಿಯಾಗಿತ್ತು. ಲೀಗ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದು ಬೀಗಿತ್ತು. ಈ ಸೋಲಿನ ಸೇಡನ್ನು ಇಂಗ್ಲೆಂಡ್​ ಸೆಮಿಫೈನಲ್​ ಪಂದ್ಯದಲ್ಲಿ ತೀರಿಸಿಕೊಂಡಿತ್ತು. ಸೆಮಿಯಲ್ಲಿ ಸೋಲಿನ ಆಘಾತ ನೀಡಿ ಆಂಗ್ಲರ ಪಡೆ ಫೈನಲ್​ ಪ್ರವೇಶಿಸಿತ್ತು. ಅಂದಿನ ಸೋಲಿನ ಸೇಡನ್ನು ಈ ಬಾರಿ ಆಸೀಸ್​ ತೀರಿಸುವ ಪಣತೊಟ್ಟಿದೆ.

ಹವಾಮಾನ ವರದಿ

IMDಯ ಮುನ್ಸೂಚನೆ ಪ್ರಕಾರ ಅಹಮದಾಬಾದ್‌ ನಗರದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಆದರೆ ಪಂದ್ಯಕ್ಕೆ ವರುಣನ ಅವಕೃಪೆ ಇರದು. ಶನಿವಾರ ಅಹಮದಾಬಾದ್​ನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇದೆ ಎಂದು ತಿಳಿಸಿದೆ. ಒಂದೊಮ್ಮೆ ಮಳೆ ಬಂದರೂ ವಿಶ್ವಕಪ್​ನಲ್ಲಿ ಯಾವುದೇ ಲೀಗ್​ ಪಂದ್ಯಕ್ಕೂ ಮೀಸಲು ದಿನ ಇಲ್ಲ. ಐಸಿಸಿ ನಿಯಮದ ಪ್ರಕಾರ ಸೆಮಿಫೈನಲ್​ನ ಎರಡು ಪಂದ್ಯಗಳಿಗೆ ಮತ್ತು ಫೈನಲ್​ಗೆ ಮಾತ್ರ ಮೀಸಲು ದಿನ ಇರಲಿದೆ. ಹೀಗಾಗಿ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗಲಿದೆ.

ಇದನ್ನೂ ಓದಿ ಮಳೆ ಭೀತಿಯ ಮಧ್ಯೆ ಪಾಕ್​-ಕಿವೀಸ್​ ಅದೃಷ್ಟ ಪರೀಕ್ಷೆ; ಇತ್ತಂಡಗಳಿಗೂ ಗೆಲುವು ಅತ್ಯಗತ್ಯ

ಪಿಚ್​ ರಿಪೋರ್ಟ್​

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್​ ಸಂಪೂರ್ಣ ಬ್ಯಾಟಿಂಗ್​ ಸ್ನೇಹಿಯಾಗಿದೆ. ಹೀಗಾಗಿ ದೊಡ್ಡ ಮೊತ್ತವನ್ನು ಇಲ್ಲಿ ನಿರೀಕ್ಷೆ ಮಾಡಬಹುದು. ಉಭಯ ತಂಡಗಳಲ್ಲಿಯೂ ಸಮರ್ಥ ಆಟಗಾರರು ನೆಚ್ಚಿಕೊಂಡಿದ್ದಾರೆ. ಸ್ಲೋ ವೇಗಿಗಳಿಗೆ ಈ ಪಿಚ್​ ಹೆಚ್ಚಿನ ನೆರವು ನೀಡುತ್ತದೆ. ಸ್ಪಿನ್​ ಬೌಲಿಂಗ್​ ಅಷ್ಟರ ಮಟ್ಟಿಗೆ ಇಲ್ಲಿ ಯಶಸ್ಸು ಕಾಣುವುದು ಕಷ್ಟ.

ಸಂಭಾವ್ಯ ತಂಡಗಳು

ಇಂಗ್ಲೆಂಡ್​: ಜಾನಿ ಬೇರ್​ಸ್ಟೋ, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್​ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್ / ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟಾಪ್ಲೆ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್​, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್​, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಜಲ್‌ವುಡ್.

Exit mobile version