ಆಂಟಿಗುವಾ: ಆಸ್ಟ್ರೇಲಿಯಾ(Australia vs Namibia) ವಿರುದ್ಧ ನಡೆದ ಪಂದ್ಯದಲ್ಲಿ ನಮೀಬಿಯಾ(AUS vs NAM) ತಂಡದ ನಾಯಕ ಗೆರ್ಹಾರ್ಡ್ ಎರಾಸ್ಮಸ್(Gerhard Erasmus) 17 ವರ್ಷಗಳ ಹಿಂದಿನ ಅನಗತ್ಯ ದಾಖಲೆಯೊಂದನ್ನು ಮುರಿದಿದ್ದಾರೆ. ಮೊದಲ ರನ್ ಗಳಿಸಲು ಅತ್ಯಧಿಕ ಎಸೆತ ಎದುರಿಸಿದ ಬ್ಯಾಟರ್ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಗೆರ್ಹಾರ್ಡ್ ಎರಾಸ್ಮಸ್ ಅವರು ಖಾತೆ ತೆರೆಯಲು ಬರೋಬ್ಬರಿ 17 ಎಸೆತಗಳನ್ನು ತೆಗೆದುಕೊಂಡರು. ಈ ವೇಳೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ರನ್ ಗಳಿಸಲು ಅತಿ ಹೆಚ್ಚು ಎಸೆತಗಳನ್ನು ಎದುರಿಸಿ ಮೊದಲ ಬ್ಯಾಟರ್ ಎನ್ನುವ ಕೆಟ್ಟ ಹಣೆಪಟ್ಟಿಯನ್ನು ತಮ್ಮ ಹೆಸರಿಗೆ ಸೇರಿಕೊಂಡರು. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಕೀನ್ಯಾ ತಂಡದ ತನ್ಮಯ್ ಮಿಶ್ರಾ(Tanmay Mishra) ಹೆಸರಿನಲ್ಲಿತ್ತು. 2007ರಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತನ್ಮಯ್ ಮಿಶ್ರಾ 16 ಎಸೆತಗಳನ್ನು ಎದುರಿಸಿ ಖಾತೆ ತೆರೆದಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ.
ಆರಂಭಿಕ ರನ್ ಗಳಿಸಲು 17 ಎಸೆತ ಎದುರಿಸಿದರೂ ಆ ಬಳಿಕ ಎರಾಸ್ಮಸ್ ಉತ್ತಮ ಬ್ಯಾಟಿಂಗ್ ನಡೆಸಿದರು. 4 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 36 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿ ಆಟಗಾರನಾಗಿ ಮೂಡಿಬಂದರು.
ಟೂರ್ನಿಯಿಂದ ಹೊರಬಿದ್ದ ನಮೀಬಿಯಾ
ಪಂದ್ಯದಲ್ಲಿ ಹೀನಾಯ ಸೋಲು ಕಂಡ ನಮೀಬಿಯಾ ಟೂರ್ನಿಯಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 17 ಓವರ್ಗೆ ಕೇವಲ 72 ರನ್ ಗಳಿಸಿ ಆಲೌಟ್ ಆಯಿತು. ಮಾರಕ ಸ್ಪಿನ್ ದಾಳಿ ನಡೆಸಿದ ಆ್ಯಡಂ ಝಂಪಾ 4 ವಿಕೆಟ್ ಕಬಳಿಸಿದರೆ ಜೋಶ್ ಹೇಝಲ್ ವುಡ್, ಮಾರ್ಕಸ್ ಸ್ಟೋಯಿನಿಸ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ IND vs USA: ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ ಉಭಯ ತಂಡಗಳು ಸೂಪರ್-8 ಪ್ರವೇಶ
ಸಣ್ಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 5.4 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 74 ರನ್ ಬಾರಿಸಿ 9 ವಿಕೆಟ್ ಅಂತರದ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ 20 ರನ್ ಗಳಿಸಿ ಔಟಾದರು. ಬಳಿಕ ಬಂದ ಮಿಚೆಲ್ ಮಾರ್ಷ್ 18* ಹಾಗೂ ಟ್ರಾವಿಸ್ ಹೆಡ್ 34* ರನ್ ಬಾರಿಸಿ ಅಜೇಯರಾಗಿ ಉಳಿದರು.
ಆ್ಯಡಂ ಝಂಪಾ 4 ವಿಕೆಟ್ ಕೀಳುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ಗಳ ಮೇಲುಗಲ್ಲು ತಲುಪಿದರು. ಆಸ್ಟ್ರೇಲಿಯಾ ‘ಬಿ’ ಗುಂಪಿನಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ಸೂಪರ್-8 ಪ್ರವೇಶ ಪಡೆಯಿತು. ಇನ್ನೊಂದು ಸ್ಥಾನಕ್ಕಾಗಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಂದೊಮ್ಮೆ ಸ್ಕಾಟ್ಲೆಂಡ್ ಮುಂದಿನ ಪಂದ್ಯದಲ್ಲಿ ಗೆದ್ದರೆ ಇಂಗ್ಲೆಂಡ್ ಟೂರ್ನಿಯಿಂದ ಹೊರಬೀಳಲಿದೆ. ಅಥವಾ ಇಂಗ್ಲೆಂಡ್ ಇನ್ನುಳಿದ 2 ಪಂದ್ಯಗಳ ಪೈಕಿ ಒಂದು ಪಂದ್ಯ ಸೋತರೂ ಹೋರಬೀಳಲಿದೆ. ಒಟ್ಟಾರೆಯಾಗಿ ಇಂಗ್ಲೆಂಡ್ ಉಭಯ ಸಂಕಟಕ್ಕೆ ಸಿಲುಕಿದೆ.