ನವದೆಹಲಿ: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 309 ರನ್ಗಳ ಬೃಹತ್ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ತನ್ನದೇ ದಾಖಲೆಯನ್ನು ತಿದ್ದಿ ಬರೆದಿದೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ದಾಖಲೆ ಭಾರತದ ಇತಿಹಾಸದಲ್ಲಿದೆ.
ಇದು ಆಸ್ಟ್ರೇಲಿಯಾ ತಂಡ ವಿಶ್ವಕಪ್ನಲ್ಲಿ ದಾಖಲಿಸಿದ ಬೃಹತ್ ಮೊತ್ತದ ಗೆಲುವಾಗಿದೆ. ಈ ಹಿಂದೆ ಕೂಡ ವಿಶ್ವಕಪ್ನಲ್ಲಿ ಅತ್ಯಧಿಕ ರನ್ಗಳಿಂದ ಗೆದ್ದ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲೇ ಇತ್ತು. 2015ರಲ್ಲಿ ನಡೆದ ವಿಶ್ವಕಪ್ನಲ್ಲಿ ಅಫಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ 275ರನ್ಗಳ ಅಂತರದ ಗೆಲುವು ಸಾಧಿತ್ತು. ಇದೀಗ 8 ವರ್ಷಗಳ ಬಳಿಕ 309 ರನ್ಗಳ ಗೆಲುವು ಸಾಧಿಸಿ ತನ್ನದೇ ವಿಶ್ವ ಕಪ್ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದೆ.
ವಿಶ್ವ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ
ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಅಂತರದಿಂದ ಗೆದ್ದ ವಿಶ್ವ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. ಇದೇ ವರ್ಷ ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 317 ರನ್ಗಳ ಹೆಲುವು ಸಾಧಿಸಿತ್ತು. ಇದು ಸದ್ಯ ವಿಶ್ವ ದಾಖಲೆಯಾಗಿದೆ. 309ರಿಂದ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಜಿಂಬಾಬ್ವೆಗೆ ಮೂರನೇ ಸ್ಥಾನ. ಇದೇ ವರ್ಷ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಅಮೆರಿಕ ವಿರುದ್ಧ 304ರನ್ ಅಂತರದಿಂದ ಗೆದ್ದಿತ್ತು.
ಇದನ್ನೂ ಓದಿ AUS vs NED: ದುಬಾರಿ ಮೊತ್ತ ನೀಡಿ ಅನಗತ್ಯ ದಾಖಲೆ ಬರೆದ ಬಾಸ್ ಡಿ ಲೀಡೆ
ಅನಗತ್ಯ ದಾಖಲೆ ಬರೆದ ನೆದರ್ಲೆಂಡ್ಸ್
ನೆದರ್ಲೆಂಡ್ಸ್ ತಂಡ 90ಕ್ಕೆ ಆಲೌಟ್ ಆಗುವ ಮೂಲಕ ಈ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ಅತಿ ಕಡಿಮೆ ರನ್ಗೆ ಆಲೌಟ್ ಆದ ಅನಗತ್ಯ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಅಫಘಾನಿಸ್ತಾನ ತಂಡದ ಪರ ಇತ್ತು. ಚೆನ್ನೈಯಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 139ರನ್ಗೆ ಆಲೌಟ್ ಆಗಿತ್ತು.
ಗೆದ್ದು ಸೆಮಿ ಆಸೆ ಜೀವಂತವಿರಿಸಿದ ಆಸೀಸ್
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಆರಂಭಕಾರ ಡೇವಿಡ್ ವಾರ್ನರ್(104) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್(106) ಅವರ ದಾಖಲೆಯ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 399 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ನೆದರ್ಲೆಂಡ್ಸ್ 21 ಓವರ್ಗಳಲ್ಲಿ 90 ರನ್ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ 309 ರನ್ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆಸೀಸ್ 6 ಅಂಕ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲೇ ಮುಂದುವರಿದು ಸೆಮಿ ಆಸೆಯನ್ನು ಜೀವಂತವಿರಿಸಿದೆ.
ಸಚಿನ್ ದಾಖಲೆ ಸರಿಗಟ್ಟಿದ ವಾರ್ನರ್
ವಿಶ್ವಕಪ್ನಲ್ಲಿ ಟೂರ್ನಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯನ್ನು ವಾರ್ನರ್ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸರಿಗಟ್ಟಿದ್ದಾರೆ. ಸಚಿನ್ ಮತ್ತು ವಾರ್ನರ್ ವಿಶ್ವಕಪ್ನಲ್ಲಿ ತಲಾ 6 ಶತಕ ಬಾರಿಸಿದ್ದಾರೆ. 7 ಶತಕ ಬಾರಿಸಿರುವ ರೋಹಿತ್ ಶರ್ಮ ಅವರು ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಅವರು ಈ ದಾಖಲೆಯನ್ನು ಹಾಲಿ ಆವೃತ್ತಿಯಲ್ಲಿ ನಿರ್ಮಿಸಿದ್ದರು. ಇದು ವಾರ್ನರ್ ಅವರ ಏಕದಿನ ಕ್ರಿಕೆಟ್ನ 22ನೇ ಶತಕವಾಗಿದೆ. ಅಂತಿಮವಾಗಿ ಅವರು 93 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 104 ರನ್ಗೆ ವಿಕೆಟ್ ಕೈಚೆಲ್ಲಿದರು. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ವಾರ್ನರ್ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಶತಕದ ಮೂಲಕ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದಂತಾಗಿದೆ.