Site icon Vistara News

AUS vs NED: ಪಂದ್ಯಕ್ಕೂ ಮುನ್ನ ಅಗಲಿದ ಬಿಷನ್‌ ಸಿಂಗ್‌ ಬೇಡಿಗೆ ಮೌನ ಪ್ರಾರ್ಥನೆ ಸಲ್ಲಿಸಿದ ಆಟಗಾರರು

Australia vs Netherlands

ನವದೆಹಲಿ: ಸೋಮವಾರಂದು ನಿಧನರಾದ ಭಾರತ ಕ್ರಿಕೆಟ್​ ತಂಡದ ಮಾಜಿ ಸ್ಪಿನ್‌ ದಿಗ್ಗಜ, ದೇಶಿ ಕ್ರಿಕೆಟ್‌ ಕಂಡ ಖಡಕ್‌ ನಾಯಕರಾಗಿದ್ದ ಬಿಷನ್‌ ಸಿಂಗ್‌ ಬೇಡಿ(Bishan Singh Bedi) ಅವರಿಗೆ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್(Australia vs Netherlands)​ ನಡುವಣ ಪಂದ್ಯದ ವೇಳೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಆಟ ಆರಂಭವಾಗುವ ಮೊದಲು ಅಗಲಿದ ಬಿಷನ್‌ ಸಿಂಗ್‌ ಬೇಡಿಗೆ ಗೌರವಾರ್ಥ ಉಭಯ ತಂಡಗಳ ಸದಸ್ಯರು ಮೈದಾನದಲ್ಲಿ ಸಾಲಾಗಿ ನಿಂತು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದರು.

ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್​ ಆಯ್ದುಕೊಂಡು ಉತ್ತಮ ಆರಂಭ ಪಡೆದಿದೆ. ಸೆಮಿಫೈನಲ್​ ರೇಸ್​ನಲ್ಲಿ ಉಳಿಯಬೇಕಾದರೆ ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ. ಉಭಯ ತಂಡಗಳ ಆಟಗಾರರು ಈ ಪಂದ್ಯದಲ್ಲಿ ಬಿಷನ್‌ ಸಿಂಗ್‌ ಬೇಡಿಗೆ ಗೌರವಾರ್ಥ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಲಿಳಿದಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ನಿಧನ

77 ವರ್ಷದವರಾಗಿದ್ದ ಬಿಷನ್​ ಸಿಂಗ್​ ಬಿಷನ್‌ ಸಿಂಗ್‌ ಬೇಡಿ ಅವರು ಅಕ್ಟೋಬರ್​ 23ರ ಸೋಮವಾರದಂದು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಈ ಮಹಾನ್‌ ಆಟಗಾರನ ಅಗಲಿಕೆಗೆ ಕ್ರಿಕೆಟ್​ ಜಗತ್ತು ಸೇರಿ ಅನೇಕರು ಕಂಬನಿ‌ ಮಿಡಿದಿದ್ದಾರೆ. 1946ರಲ್ಲಿ ಅಮೃತಸರದ ಸಂಪ್ರದಾಯಸ್ಥ ಸಿಕ್ಖ್ ಕುಟುಂಬದಲ್ಲಿ ಜನಿಸಿದ ಬಿಷನ್‌ ಸಿಂಗ್‌ ಬೇಡಿ ಅವರು 1967-1979ರ ಅವಧಿಯಲ್ಲಿ 67 ಟೆಸ್ಟ್‌ ಪಂದ್ಯಗಳನ್ನಾಡಿದ್ದರು.

bishan singh bedi


ಭಾರತ ಕಂಡ ದಿಗ್ಗಜ ಸ್ಪಿನ್ನರ್​

ಬಿಷನ್‌ ಸಿಂಗ್‌ ಬೇಡಿ ಅವರು ಭಾರತ ಪರ 67 ಟೆಸ್ಟ್‌ ಪಂದ್ಯಗಳಿಂದ 266 ವಿಕೆಟ್‌, ಏಕದಿನದಲ್ಲಿ 7 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದರು. ಬೇಡಿ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಇನ್ನಿಂಗ್ಸ್‌ ಒಂದರಲ್ಲಿ 98ಕ್ಕೆ 7 ವಿಕೆಟ್‌, ಟೆಸ್ಟ್‌ ಒಂದರಲ್ಲಿ 194ಕ್ಕೆ 10 ವಿಕೆಟ್‌ ಉರುಳಿಸಿದ್ದು ಬೇಡಿ ಅವರ ಅತ್ಯುತ್ತಮ ಸಾಧನೆಯಾಗಿದೆ. 1975ರ ವಿಶ್ವಕಪ್‌ ಪಂದ್ಯದಲ್ಲಿ 12 ಓವರ್‌ಗಳಲ್ಲಿ 8 ಮೇಡನ್‌ ಮಾಡಿ, ಕೇವಲ 6 ರನ್‌ ನೀಡಿದ್ದು ಬೇಡಿ ಅವರ ಬೌಲಿಂಗ್‌ ಪರಾಕ್ರಮಕ್ಕೊಂದು ಸಾಕ್ಷಿ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಛಾಪು ಮೂಡಿಸಿದ್ದ ಇವರು 370 ಪಂದ್ಯಗಳಿಂದ 1,560 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ Bishan Singh Bedi : ಬಿಷನ್​ ಸಿಂಗ್​ ನನ್ನ ಹೀರೊ; ಕಪಿಲ್ ದೇವ್ ಹೀಗೆ ಹೇಳುವುದಕ್ಕೊಂದು ಕಾರಣವಿದೆ

ಬೇಡಿ ಅವರು 1975-1979ರ ಅವಧಿಯಲ್ಲಿ ಭಾರತ ಟೆಸ್ಟ್‌ ತಂಡದ ನಾಯಕರೂ ಆಗಿದ್ದರು. ಮನ್ಸೂರ್‌ ಅಲಿ ಖಾನ್‌ ಪಟೌಡಿ ಅವರ ನಿವೃತ್ತಿ ಬಳಿಕ ಬೇಡಿ ಅವರು ತಂಡವನ್ನು ಮುನ್ನಡೆಸಿದ್ದರು. 1974-1982ರ ಅವಧಿಯಲ್ಲಿ ದೆಹಲಿ ರಣಜಿ ತಂಡದ ನಾಯಕರಾಗಿ ಇವರ ಸಾರಥ್ಯದಲ್ಲಿ ತಂಡ 2 ಸಲ ರಣಜಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ಒಟ್ಟಾರೆ ಅವರು ಭಾರತೀಯ ಕ್ರಿಕೆಟ್​ಗೆ ಅಪಾರ ಕೊಡುಗೆ ನೀಡಿದ್ದರು.

Exit mobile version