ಧರ್ಮಶಾಲಾ: ವಿಶ್ವಕಪ್ ಪಂದ್ಯಾವಳಿಯ ಶನಿವಾರದ ಡಬಲ್ ಹೆಡರ್ನಲ್ಲಿ ದೊಡ್ಡ ಕದನವೊಂದು ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ(Dharamsala) ನಡೆಯಲಿದೆ. ಇದಕ್ಕೆ ಸಾಕ್ಷಿಯಾಗಲಿರುವ ತಂಡಗಳೆಂದರೆ ನ್ಯೂಜಿಲ್ಯಾಂಡ್(AUS vs NZ) ಮತ್ತು 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ. ಎರಡೂ ಬಲಿಷ್ಠ ಪಡೆಗಳಾಗಿರುವುದರಿಂದ ಈ ಪಂದ್ಯ ಹೈವೋಲ್ಟೇಜ್ನಿಂದ ಕೂಡಿರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ವಿಶ್ವಕಪ್ ದಾಖಲೆ
ಇತ್ತಂಡಗಳು ಏಕದಿನ ವಿಶ್ವಕಪ್ನಲ್ಲಿ ಒಟ್ಟು 11 ಪಂದ್ಯಗಳಲ್ಲಿ ಸೆಣಸಾಡಿವೆ. ಬಲಾಬಲದ ಲೆಕ್ಕಾಚಾರದಲ್ಲಿ ಆಸೀಸ್ ತಂಡ ಮುಂದಿದೆ. ಕಾಂಗರೂ ಪಡೆ 8 ಪಂದ್ಯಗಳನ್ನು ಗೆದ್ದಿದೆ. ಕಿವೀಸ್ ಕೇವಲ 3 ಮೂರು ಪಂದ್ಯ ಮಾತ್ರ ಗೆದ್ದಿದೆ. 2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ಪಂದ್ಯದಲ್ಲೂ ಆಸ್ಟ್ರೇಲಿಯಾ 86 ರನ್ಗಳ ಗೆಲುವು ಸಾಧಿಸಿತ್ತು. 2015ರಲ್ಲಿ ನಡೆದ ಜಂಟಿ ಆತಿಥ್ಯದಲ್ಲಿ ಉಭಯ ತಂಡಗಳು ಫೈನಲ್ನಲ್ಲಿ ಪ್ರಶಸ್ತಿಗಾಗಿ ಕಾದಡಿದ್ದವು. ಇಲ್ಲಿಯೂ ಆಸೀಸ್ ತಂಡವೇ ಗೆದ್ದು ಬೀಗುದರ ಜತೆಗೆ 5ನೇ ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ಎಲ್ಲ ಸೋಲಿಗೆ ಶನಿವಾರ ಕಿವೀಸ್ ಸೇಡು ತೀರಿಸುವ ತವಕದಲ್ಲಿದೆ.
ಏಕದಿನ ಮುಖಾಮುಖಿ
ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು 141 ಬಾರಿ ಮುಖಾಮುಖಿಯಾಗಿವೆ. ಇಲ್ಲಿ ಆಸ್ಟ್ರೇಲಿಯಾ 95 ಪಂದ್ಯಗಳನ್ನು ಗೆದ್ದರೆ, ನ್ಯೂಜಿಲ್ಯಾಂಡ್ 39 ಪಂದ್ಯಗಳನ್ನು ಜಯಿಸಿದೆ. 7 ಪಂದ್ಯಗಳು ಫಲಿತಾಂಶ ಕಂಡಿಲ್ಲ. ಈ ಬಾರಿಯ ವಿಶ್ವಕಪ್ನಲ್ಲಿ ನೋಡುವುದಾದರೆ, ಕಿವೀಸ್ ಅತ್ಯಂತ ಬಲಿಷ್ಠವಾಗಿದೆ. ಆಡಿದ 5 ಪಂದ್ಯಗಳಲ್ಲಿ 4 ಗೆಲುವು ಕಂಡಿದೆ. ಆಸೀಸ್ 5 ಪಂದ್ಯಗಳಿಂದ ಮೂರು ಪಂದ್ಯ ಮಾತ್ರ ಗೆದ್ದಿದೆ. ಈ ಲೆಕ್ಕಾಚಾರಲ್ಲಿ ಕಿವೀಸ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಉಭಯ ತಂಡಗಳೂ ಸಮರ್ಥ
ಆರಂಭಿಕ ಎರಡು ಪಂದ್ಯಗಳನ್ನು ಸೋತಾಗ ಆಸ್ಟ್ರೇಲಿಯಾ ತಂಡ ಈ ಬಾರಿ ಸೆಮಿಫೈನಲ್ ಕೂಡ ಪ್ರವೇಶ ಪಡೆಯುವುದು ಅನುಮಾನ ಎಂದು ಕ್ರಿಕೆಟ್ ಅಭಿಮಾನಿಗಳು ಊಹಿಸಿದ್ದರು. ಆದರೆ ಕಾಂಗರೂ ಪಡೆಯನ್ನು ಯಾವತ್ತಿಗೂ ಲಘುವಾಗಿ ಕಾಣಲು ಸಾಧ್ಯವಿಲ್ಲ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಸೋಲಿನ ಬಳಿಕ ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಹೊಸ್ತಿಲಲ್ಲಿ ಬಂದು ನಿಂತಿದೆ. ಎಂತಹ ಪರಿಸ್ಥಿಯಿಯಲ್ಲೂ ಪುಟಿದೆದ್ದು ಪ್ರಶಸ್ತಿ ಗೆಲ್ಲುವ ತಾಕತ್ತು ಆಸೀಸ್ಗೆ ಇದೆ. ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಡೇವಿಡ್ ವಾರ್ನರ್ ಶತತ 2 ಶಕಕ ಬಾರಿಸಿದ ಜೋಶ್ನಲ್ಲಿದ್ದಾರೆ. ವಿಶ್ವಕಪ್ನಲ್ಲಿ ದಾಖಲೆಯ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಡೇಂಜರಸ್ ಆಗಿದ್ದಾರೆ. ಝಂಪಾ ಕೂಡ ಸ್ಪಿನ್ ಮೋಡಿ ಮಾಡಬಲ್ಲರು.
ಇದನ್ನೂ ಓದಿ Virat Kohli: ಎಷ್ಟು ಬಾರಿ ವಿರಾಟ್ ಕೊಹ್ಲಿ ‘ನರ್ವಸ್ 90’ಗೆ ವಿಕೆಟ್ ಒಪ್ಪಿಸಿದ್ದಾರೆ?
ಕಿವೀಸ್ ಕೂಡ ಸಾಮಾನ್ಯ ತಂಡವಲ್ಲ. ಇಲ್ಲಿಯೂ ಬಲಿಷ್ಠ ಆಟಗಾರರರಿದ್ದಾರೆ. ಭಾರತೀಯ ಮೂಲದ ರಚೀನ್ ರವೀಂದ್ರ, ಡ್ಯಾರಿಯಲ್ ಮಿಚೆಲ್, ಪಂದ್ಯದ ಗತಿಯನ್ನೇ ಬದಲಿಸಬಲ್ಲ ಗ್ಲೆನ್ ಫಿಲಿಪ್ಸ್ ಮತ್ತು ಮಾರ್ಕ್ ಚಾಪ್ಮನ್ ಕೂಡ ದೊಡ್ಡ ಮೊತ್ತವನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಿಚೆಲ್ ಸ್ಯಾಂಟ್ನರ್ ಅವರಂತೂ ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎಲ್ಲ ವಿಭಾಗದಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ.
ಇದನ್ನೂ ಓದಿ Babar Azam: ಪಾಕ್ ನಾಯಕನ ಬೆಂಬಲಕ್ಕೆ ನಿಂತ ಟೀಮ್ ಇಂಡಿಯಾದ ಮಾಜಿ ಆಟಗಾರ
ಪಿಚ್ ರಿಪೋರ್ಟ್
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ(Himachal Pradesh Cricket Association Stadium) (ಎಚ್‌ಪಿಸಿಎ) ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್ ಓವಲ್, ನ್ಯೂಜಿಲ್ಯಾಂಡ್ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ಹೀಗಾಗಿ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್ ಬೌಲಿಂಗ್ ಸ್ವರ್ಗವೆನಿಸಿದೆ. ಉಭಯ ತಂಡಗಳೂ ಕೂಡ ಉತ್ತಮ ಪೇಸ್ ಬೌಲಿಂಗ್ ಪಡೆಯನ್ನು ಹೊಂದಿರುವ ಕಾರಣ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಅಧಿಕ.
ಹವಾಮಾನ ವರದಿ
ಹವಾಮಾನ ಇಲಾಖೆಯ ವರದಿ ಪ್ರಕಾರ, ಈ ಪಂದ್ಯಕ್ಕೆ ಮಳೆಯ ಭೀತಿ ಇರಲಿದೆ ಎಂದು ತಿಳಿಸಿದೆ. ಕಳೆದ ಭಾರತ ವಿರುದ್ಧದ ಪಂದ್ಯದಲ್ಲಿ ಮಂಜಿನ ಕಾರಣ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಈ ಪಂದ್ಯಕ್ಕೆ ಮಳೆ ಇರದಿದ್ದರೂ ಮಂಜಿನ ಕಾಟ ಇರಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಸಂಭಾವ್ಯ ತಂಡ
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಝಂಪಾ, ಜೋಶ್ ಹ್ಯಾಜಲ್‌ವುಡ್.