ಧರ್ಮಶಾಲಾ: ನ್ಯೂಜಿಲ್ಯಾಂಡ್(AUS vs NZ) ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಆಸ್ಟ್ರೇಲಿಯಾ ತಂಡದ ಟ್ರಾವಿಸ್ ಹೆಡ್ ವಿಶ್ವಕಪ್ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇವರ ಬ್ಯಾಟಿಂಗ್ ಸಾಹಸದಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿದೆ.
ಧರ್ಮಶಾಲಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾಕ್ಕೆ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಅವರು ಸೇರಿಕೊಂಡು ಬೃಹತ್ ಮೊತ್ತದ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಹೆಡ್ 25 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಈ ಬಾರಿಯ ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದರು.
ಚೊಚ್ಚಲ ಪಂದ್ಯದಲ್ಲೇ ಶತಕ
ಚೊಚ್ಚಲ ವಿಶ್ವಕಪ್ ಆಡಲಿಳಿದ ಟ್ರಾವಿಸ್ ಹೆಡ್ ಶತಕ ಬಾರಿಸುವ ಮೂಲಕ 2 ದಾಖಲೆಯನ್ನು ಬರೆದರು. ಆಸ್ಟ್ರೇಲಿಯಾ ಪರ ಚೊಚ್ಚಲ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ 5ನೇ ಆಟಗಾರ ಎನಿಸಿಕೊಂಡರು. ಇದು ಮಾತ್ರವಲ್ಲದೆ ವಿಶ್ವಕಪ್ ಪದಾರ್ಪಣೆ ಪಂದ್ಯದಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು.
ಡೇವಿಡ್ ವಾರ್ನರ್ ಜೊತೆಗೂಡಿ, ಪವರ್‌ಪ್ಲೇನಲ್ಲಿ ಹೆಡ್ 118 ರನ್‌ಗಳನ್ನು ಸೇರಿಸಿ ಆರಂಭಿಕ 10 ಓವರ್‌ಗಳಲ್ಲಿ ಗರಿಷ್ಠ ವಿಶ್ವಕಪ್ ಸ್ಕೋರ್ ದಾಖಲಿಸಿದರು. ಮೊದಲ ವಿಕೆಟ್ಗೆ 175 ರನ್ ಒಟ್ಟುಗೂಡಿಸಿದರು. ಒಟ್ಟು 67 ಎಸೆತ ಎದುರಿಸಿದ ಅವರು 7 ಸಿಕ್ಸರ್ ಮತ್ತು 10 ಬೌಂಡರಿ ನೆರವಿನಿಂದ 109 ರನ್ ಬಾರಿಸಿದರು.
ಆಸ್ಟ್ರೇಲಿಯಾ ಪರ ಚೊಚ್ಚಲ ವಿಶ್ವಕಪ್ ಪಂದ್ಯ ಆಡಿ ಶತಕ ಬಾರಿಸಿದ ಮೊದಲ ಆಟಗಾರ ಟ್ರೆವರ್ ಚಾಪೆಲ್. 1983ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ 110 ರನ್ ಬಾರಿಸಿದ್ದರು. ಆಸ್ಟ್ರೇಲಿಯಾ ಪರ ಚೊಚ್ಚಲ ಪಂದ್ಯದಲ್ಲೇ ಅತ್ಯಧಿಕ ರನ್ ಬಾರಿಸಿದ ದಾಖಲೆ ಆ್ಯಂಡ್ರ್ಯೂ ಸೈಮಂಡ್ಸ್ ಹೆಸರಿನಲ್ಲಿದೆ. ಅವರು 2003ರಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 143 ರನ್ ಬಾರಿಸಿದ್ದರು.
ಇದನ್ನೂ ಓದಿ PAK vs SA: ಅಂಪೈರ್ಸ್ ಕಾಲ್ ವಿಚಾರದಲ್ಲಿ ಕಿತ್ತಾಟ ನಡೆಸಿದ ಹರ್ಭಜನ್-ಸ್ಮಿತ್; ಪೋಸ್ಟ್ ವೈರಲ್
ಮ್ಯಾಕ್ಸ್ವೆಲ್ ಹೆಸರಿನಲ್ಲಿದೆ ದಾಖಲೆ
ವಿಶ್ವಕಪ್ ಟೂರ್ನಿಯಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಹೆಸರಿನಲ್ಲಿದೆ. ಅವರು ಇದೇ ಟೂರ್ನಿಯಲ್ಲಿ ಈ ದಾಖಲೆಯನ್ನು ಬರೆದಿದ್ದರು. 40 ಎಸೆತಗಳಿಂದ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಆಟಗಾರ ಐಡೆನ್ ಮಾರ್ಕ್ರಮ್ ಅವರು 49 ಎಸೆತಗಳಿಂದ ಶತಕ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. 2015ರ ವಿಶ್ವಕಪ್‌ನಲ್ಲಿ 51 ಎಸೆತಗಳಿಂದ ಮ್ಯಾಕ್ಸ್ವೆಲ್ ಶತಕ ಬಾರಿಸಿದ್ದರು.
Travis Head celebrating a century on CWC debut 💯🙌#CWC23 | #AUSvNZ pic.twitter.com/pjzgik7HGr
— ICC (@ICC) October 28, 2023
ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿದೆ ಅವರು 2015ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 31 ಎಸೆತಗಳಲ್ಲಿ ಶತಕ ಬಾರಿಸಿದ್ದರು. 36 ಎಸೆತಗಳಿಂದ ಶತಕ ಬಾರಿಸಿದ ನ್ಯೂಜಿಲ್ಯಾಂಡ್ನ ಕೋರಿ ಆ್ಯಂಡರ್ಸನ್ ದ್ವಿತೀಯ ಸ್ಥಾನದಲ್ಲಿದ್ದಾರೆ.