Site icon Vistara News

AUS vs PAK: ಪಾಕ್‌ ವಿರುದ್ಧವೇ ಪಾಕ್‌ ಮಾಜಿ ವೇಗಿಯ ದಾಖಲೆ ಸರಿಗಟ್ಟಿದ ಮಿಚೆಲ್ ಸ್ಟಾರ್ಕ್‌

mitchell starc

ಬೆಂಗಳೂರು: ಆಸ್ಟ್ರೇಲಿಯಾದ ಸ್ಟಾರ್‌ ವೇಗಿ ಮಿಚೆಲ್ ಸ್ಟಾರ್ಕ್‌(Mitchell Starc) ಅವರು ಪಾಕಿಸ್ತಾನ(Australia vs Pakistan) ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್‌ ಕೀಳುವ ಮೂಲಕ ಏಕದಿನ ವಿಶ್ವಕಪ್‌(icc world cup 2023) ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್‌(wasim akram) ದಾಖಲೆ ಸರಿಗಟ್ಟಿದ್ದಾರೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ ತಂಡ ಡೇವಿಡ್‌ ವಾರ್ನರ್ ಹಾಗೂ ಮಿಚೆಲ್ ಮಾರ್ಷ್‌ ಗಳಿಸಿದ ಅಮೋಘ ಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 367 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 45.3 ಓವರ್‌ಗಳಲ್ಲಿ 305 ರನ್ ಗಳಿಸಿ ಆಲೌಟ್‌ ಆಗಿ 62 ರನ್‌ಗಳ ಸೋಲು ಕಂಡಿತು.

ಆಸೀಸ್‌ನ ಬೌಲಿಂಗ್‌ ಇನಿಂಗ್ಸ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಅವರು ಹಸನ್‌ ಅಲಿ ಅವರ ವಿಕೆಟ್‌ ಪಡೆಯುವ ಮೂಲಕ ವಾಸಿಂ ಅಕ್ರಮ್‌ ದಾಖಲೆನ್ನು ಸರಿಗಟ್ಟಿದರು. ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಸ್ಟಾರ್ಕ್‌ ಸದ್ಯ 22 ಪಂದ್ಯಗಳನ್ನು ಆಡಿ 4.80ರ ಸರಾಸರಿಯಲ್ಲಿ 55 ವಿಕೆಟ್‌ ಕಬಳಿಸಿದ್ದಾರೆ. ಆ ಮೂಲಕ ವಿಶ್ವಕಪ್‌ನಲ್ಲಿ ಅಧಿಕ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವಾಸಿಂ ಅಕ್ರಮ್‌ ಅವರೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ ಸ್ಟಾರ್ಕ್‌ ಒಂದು ವಿಕೆಟ್‌ ಪಡೆದರೆ ಅಕ್ರಮ್‌ ದಾಖಲೆ ಪತನಗೊಳ್ಳಲಿದೆ. ಅಕ್ರಮ್‌ ಅವರು 38 ವಿಶ್ವಕಪ್‌ ಪಂದ್ಯಗಳನ್ನು ಆಡಿ 55 ವಿಕೆಟ್‌ ಪಡೆದಿದ್ದಾರೆ. 28ಕ್ಕೆ 5 ವಿಕೆಟ್​ ಪಡೆದದ್ದು ಉತ್ತಮ ಬೌಲಿಂಗ್​ ಸಾಧನೆಯಾಗಿದೆ. 

ಭಾರತದ ಮಾಜಿ ವೇಗಿ ಜಹೀರ್‌ ಖಾನ್‌ 23 ಪಂದ್ಯಗಳಲ್ಲಿ 44 ವಿಕೆಟ್‌ ಉರುಳಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ David Warner: ಪ್ರಚಂಡ ಶತಕದ ಮೂಲಕ ಕೊಹ್ಲಿಯ ದಾಖಲೆ ಸರಿಗಟ್ಟಿದ ಡೇವಿಡ್‌ ವಾರ್ನರ್‌

ಗ್ಲೆನ್ ಮೆಕ್​ಗ್ರಾತ್‌ಗೆ ಮೊದಲ ಸ್ಥಾನ

ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾತ್(Glenn McGrath) ಅವರು ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಪಡೆದ ಆಟಗಾರನಾಗಿದ್ದಾರೆ. 1996-2007ರ ತನಕ ವಿಶ್ವಕಪ್​ ಆಡಿದ ಸಾಧನೆ ಇವರದ್ದು. ಅಲ್ಲದೆ ಮೂರು ಬಾರಿಯ ವಿಶ್ವಕಪ್​ ವಿಜೇತ ತಂಡದ ಸದಸ್ಯ ಎಂಬ ಹಿರಿಮೆಯೂ ಇವರ ಪಾಲಿಗಿದೆ. 39 ವಿಶ್ವಕಪ್​ ಪಂದ್ಯ ಆಡಿರುವ ಅವರು 1955 ಬಾಲ್​ ಎಸೆದು 71 ವಿಕೆಟ್​ ಕೆಡವಿದ್ದಾರೆ. 42 ಮೇಡನ್​ ಒಳಗೊಂಡಿದೆ. 15 ರನ್​ಗೆ 7 ವಿಕೆಟ್​ ಕಿತ್ತದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.

ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮುರಳೀಧರನ್ 1996-2011ರ ವರೆಗೆ ವಿಶ್ವಕಪ್​ ಆಡಿ 68 ವಿಕೆಟ್​ ಪಡೆದಿದ್ದಾರೆ. ಒಟ್ಟು 40 ಪಂದ್ಯ ಆಡಿದ್ದಾರೆ. 15 ಮೇಡನ್​, 19 ರನ್​ಗೆ 4 ವಿಕೆಟ್​ ಕಿತ್ತಿರುವದು ವೈಯಕ್ತಿಕ ಸಾಧನೆಯಾಗಿದೆ. 2061 ಬೌಲ್​ ಎಸೆದಿದ್ದಾರೆ.

ಯಾರ್ಕರ್​ ಕಿಂಗ್​ ಲಂಕಾದ ಲಸಿತ ಮಾಲಿಂಗ ಅವರು 2007-2019ರ ತನಕ ವಿಶ್ವಕಪ್​ ಆಡಿ 56 ವಿಕೆಟ್​ ಕಿತ್ತಿದ್ದಾರೆ. ಈ ಮೂಲಕ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇದಲ್ಲದೆ ವಿಶ್ವಕಪ್​ ಟೂರ್ನಿಯಲ್ಲಿ ಎರಡು ಬಾರಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಮೊದಲ ಬೌಲರ್​ ಎನಿಸಿಕೊಂಡಿದ್ದಾರೆ. 29 ಪಂದ್ಯಗಳನ್ನು ಆಡಿದ್ದಾರೆ. 38ಕ್ಕೆ 6 ವಿಕೆಟ್​ ಉತ್ತಮ ಬೌಲಿಂಗ್​ ಸಾಧನೆಯಾಗಿದೆ.

Exit mobile version