ಬ್ರಿಸ್ಬೇನ್: ಗಬ್ಬಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಬಿಗು ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ 6 ವಿಕೆಟ್ಗಳ ಸೋಲು ಕಂಡಿದೆ. ಇದರಿಂದಿಗೆ ಈ ಪಂದ್ಯ ಕೇವಲ 2ನೇ ದಿನದಲ್ಲಿ ಅಂತ್ಯಗೊಂಡಿದೆ. ದಕ್ಷಿಣ ಆಫ್ರಿಕಾದ ಈ ಸೋಲಿನಿಂದ ಭಾರತ ತಂಡಕ್ಕೆ ಲಾಭವಾಗಿದೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಟೆಸ್ಟ್ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವುದರಿಂದ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಹಾದಿಯಲ್ಲಿ ಅಲ್ಪ ಮುನ್ನಡೆ ಸಿಕ್ಕಂತಾಗಿದೆ. ಏಕೆಂದರೆ ಸದ್ಯ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲಿ ದ. ಆಫ್ರಿಕಾ ಈ ಸೋಲಿನಿಂದ ಎರಡನೇ ಸ್ಥಾನದಿಂದ ಮೂರಕ್ಕೆ ಜಾರಿದೆ. ಬಾಂಗ್ಲಾ ವಿರುದ್ಧ ಮೊದಲ ಪಂದ್ಯ ಗೆದ್ದ ಭಾರತ 2ನೇ ಸ್ಥಾನಕ್ಕೇರಿದೆ. ಹೀಗಾಗಿ ಭಾರತ ಫೈನಲ್ಗೇರಬೇಕೆಂದರೆ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸೋಲನ್ನು ಹಾರೈಸಬೇಕಿದೆ. ಜತೆಗೆ ಭಾರತ ಬಾಂಗ್ಲಾ ವಿರುದ್ಧ ಸರಣಿ ಗೆಲುವು ಹಾಗೂ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ ಮಾತ್ರ ಭಾರತ ಫೈನಲ್ಗೆ ಎಂಟ್ರಿಕೊಡಲಿದೆ.
ಶನಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 152 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 217 ರನ್ಗೆ ಸರ್ವಪತನ ಕಂಡು ಮೊದಲ ಇನಿಂಗ್ಸ್ನಲ್ಲಿ 66 ರನ್ಗಳ ಮುನ್ನಡೆ ಸಾಧಿಸಿತು.
66 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆಟಗಾರರು ಬ್ಯಾಟಿಂಗ್ ಮರೆತಂತೆ ಆಟವಾಡಿದ ಪರಿಣಾಮ 99 ರನ್ಗೆ ಆಲೌಟ್ ಆಯಿತು.
34 ರನ್ಗಳ ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 35 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಆಸೀಸ್ ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಅಂತಿಮ ಪಂದ್ಯ ಡಿಸೆಂಬರ್ 25ರಂದು ಮೆಲ್ಬೋರ್ನ್ನಲ್ಲಿ ನಡೆಯಲಿದೆ.
ಇದನ್ನೂ ಓದಿ | IND VS BAN | ಮೊದಲ ಟೆಸ್ಟ್: ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್ ಅಂತರದ ಗೆಲುವು