ಮೆಲ್ಬೋರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ(AUS VS SA) ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಾರ್ನರ್(ಅಜೇಯ 200) ಈ ಸಾಧನೆ ಮೆರೆದರು. ಇದಕ್ಕೂ ಮೊದಲು ಇಂಗ್ಲೆಂಡ್ ಟೆಸ್ಟ್ ತಂಡದ ಮಾಜಿ ನಾಯಕ ಜೋ ರೂಟ್ ಅವರು 2021 ರಲ್ಲಿ ಭಾರತ ವಿರುದ್ಧ ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಇದೀಗ ಈ ಸಾಲಿಗೆ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಸೇರ್ಪಡೆಯಾಗಿದ್ದಾರೆ.
ಪಂದ್ಯದ ಎರಡನೇ ದಿನ 254 ಎಸೆತ ಎದುರಿಸಿದ ವಾರ್ನರ್ ಅಜೇಯ 200 ರನ್ ಗಳಿಸಿದ ವೇಳೆ ಚೆಂಡು ತಗುಲಿಸಿಕೊಂಡು ಡ್ರೆಸ್ಸಿಂಗ್ ಕೊಠಡಿಗೆ ಮರಳಿದರು. ಸದ್ಯ ಅವರು ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ದ್ವಿಶತಕಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ನಲ್ಲಿ 8 ಸಾವಿರ ರನ್ ಪೂರ್ತಿಗೊಳಿಸಿದ ಸಾಧನೆ ಮೆರೆದಿದ್ದರು.
ಬ್ಯಾಟಿಂಗ್ ಪಾರ್ಮ್ ಕಂಡುಕೊಂಡ ವಾರ್ನರ್
ಡೇವಿಡ್ ವಾರ್ನರ್ 2020ರ ಜನವರಿ ತಿಂಗಳಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್ ಶತಕ ಬಾರಿಸಿದ್ದರು. ಆ ಬಳಿಕ ಅವರಿಂದ ಟೆಸ್ಟ್ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ದ್ವಿಶತಕ ಬಾರಿಸುವ ಮೂಲಕ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವ ಜತೆಗೆ ಕೆಲ ದಾಖಲೆಯನ್ನು ನಿರ್ಮಿಸುದ್ದು ವಿಶೇಷ.
ಇದನ್ನೂ ಓದಿ | David Warner | ನೂರನೇ ಪಂದ್ಯದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಡೇವಿಡ್ ವಾರ್ನರ್!