ಕೋಲ್ಕೊತಾ: ಗುರುವಾರದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(AUS vs SA) ಮುಖಾಮುಖಿಯಾಗಿವೆ. ಇದುವರೆಗೆ ನಾಲ್ಕು ಸೆಮಿಫೈನಲ್ ಆಡಿರುವ ದಕ್ಷಿಣ ಆಫ್ರಿಕಾ ಒಂದು ಬಾರಿಯೂ ಫೈನಲ್ ಕಂಡಿಲ್ಲ. ಈ ಬಾರಿ ಆಸೀಸ್ ತಂಡವನ್ನು ಮಣಿಸಿ ಚೊಚ್ಚಲ ಫೈನಲ್ಗೇರುವುದು ಟೆಂಬ ಬವುಮಾ ಪಡೆಯ ಯೋಜನೆಯಾಗಿದೆ.
ಲೀಗ್ನಲ್ಲಿ ಗೆದ್ದ ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ತಂಡ ಲೀಗ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 134 ರನ್ಗಳ ಸೋಲುಣಿಸಿತ್ತು. ಇದೇ ವಿಶ್ವಾಸದಲ್ಲಿ ಸೆಮಿಫೈನಲ್ನಲ್ಲಿಯೂ ಕಣಕ್ಕಿಳಿಯುವ ವಿಶ್ವಾಸದಲ್ಲಿದೆ.
ಹರಿಣಗಳು ಬಲಿಷ್ಠ
4 ಶತಕ ಬಾರಿಸಿದ ಕ್ವಿಂಟನ್ ಡಿ ಕಾಕ್, ಮಧ್ಯಮ ಕ್ರಮಾಂಕದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವ ಹೆನ್ರಿಚ್ ಕ್ಲಾಸೆನ್, ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲ ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಮ್, ರಸ್ಸಿ ವಾನ್ಡರ್ ಡುಸ್ಸೆನ್, ಅಂತಿಮ ಹಂತದಲ್ಲಿ ಸಿಡಿದು ನಿಲ್ಲುವ ಬೌಲರ್ ಮಾರ್ಕೊ ಜಾನ್ಸನ್ ಇವರೆಲ್ಲ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬಲ. ಇವರನ್ನೆಲ್ಲ ಕಟ್ಟಿ ಹಾಕುವುದು ಅಷ್ಟೂ ಸುಲಭವಲ್ಲ. ಅಲ್ಲದೆ ಈ ತಂಡದಲ್ಲಿ ಸ್ಪೆಶಲಿಸ್ಟ್ ಸ್ಪಿನ್ನರ್ ಕೇಶವ್ ಮಹರಾಜ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಎದುರಾಳಿಗಳಿಗೆ ಚಮಕ್ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಡಿ ಕಾಕ್ ಮೇಲೆ ಹೆಚ್ಚಿನ ಭರವಸೆ
ಲೀಗ್ನಲ್ಲಿ 9 ಪಂದ್ಯಗಳನ್ನು ಆಡಡಿ 591 ರನ್ ಬಾರಿಸಿರುವ ಕ್ವಿಂಟನ್ ಡಿಕ್ ಕಾಕ್ ಅವರು ಅತ್ಯಧಿಕ ರನ್ ಗಳಿಸಿದವರ ಯಾದಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 83 ರನ್ ಬಾರಿಸಿದರೆ ಸಚಿನ್ ಅವರ ಅತ್ಯಧಿಕ ರನ್ ದಾಖಲೆಯನ್ನು ಮುರಿಯಲಿದ್ದಾರೆ. ವಿಶ್ವಕಪ್ ಟೂರ್ನಿಯ ಬಳಿಕ ಡಿ ಕಾಕ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದ್ದಾರೆ. ಅವರಿಗೆ ವಿಶ್ವಕಪ್ ಗೆಲುವಿನ ವಿದಾಯ ಸಿಗಲಿದೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IND vs NZ : ಸೆಮಿಫೈನಲ್ ಪಂದ್ಯದ ಪಿಚ್ ಬದಲಾಯಿಸಲಾಗಿದೆಯೇ? ಏನಿದು ಆರೋಪ?
ಅಪಾಯಕಾರಿ ಮ್ಯಾಕ್ಸ್ವೆಲ್
ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯವನ್ನೂ ಲೆಕ್ಕಿಸದೆ ಏಕಾಂಗಿಯಾಗಿ ನಿಂತು ಅಜೇಯ 200 ರನ್ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟ ಮ್ಯಾಕ್ಸ್ವೆಲ್ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಇವರನ್ನು ಹೆಚ್ಚು ಕಾಲ ಕ್ರೀಸ್ ಆಕ್ರಮಿಸಲು ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಡೇವಿಡ್ ವಾರ್ನರ್ ಕೂಡ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವುದು ಕೂಡ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಡಿಫರೆಂಟ್ ಗೇಮ್
ಆಸ್ಟ್ರೇಲಿಯಾದ್ದು ಐಸಿಸಿ ಟೂರ್ನಿಗಳಲ್ಲಿ ಡಿಫರೆಂಟ್ ಗೇಮ್. ಎದುರಾಳಿ ತಂಡ ಯಾವುದೇ ಇರಲಿ ಆರಂಭದಿಂದಲೇ ಒತ್ತಡ ಹೇರಿ ಅರ್ಧ ಪಂದ್ಯವನ್ನು ಗೆದ್ದುಬಿಡುತ್ತಾರೆ. ಅದರಲ್ಲೂ ಮೊದಲು ಬ್ಯಾಟಿಂಗ್ ಸಿಕ್ಕರಂತೂ ಹೇಳುವುದೇ ಬೇಡ ಆರಂಭದಿಂದಲೇ ಆಕ್ರಮಣಕಾರಿಯಾಗಿ ಮುನ್ನುಗ್ಗಿ ಬೃಹತ್ ಮೊತ್ತ ದಾಖಲಿಸಿ ಬಿಡುತ್ತಾರೆ. ಈ ಮೂಲಕ ಒತ್ತಡ ಹೇರುತ್ತಾರೆ.
ವಿಶ್ವಕಪ್ ಟೂರ್ನಿಯಲ್ಲಿ ಇತ್ತಂಡಗಳು 2 ಬಾರಿ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಆದರೆ ದಕ್ಷಿಣ ಆಫ್ರಿಕಾ ಎರಡಲ್ಲೂ ಸೋಲು ಕಂಡಿದೆ. ಅದರಲ್ಲೂ 1999ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ರನ್ ರೇಟ್ ಆಧಾರದಲ್ಲಿ ಸೋಲು ಕಂಡಿತ್ತು.
ಹೀಗೊಂದು ಲೆಕ್ಕಾಚಾರ
ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಆಡಿದ ಎಲ್ಲ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು ಆ ವರ್ಷ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗಾಗಿ ಈ ಬಾರಿಯೂ ಆಸೀಸ್ ಹರಿಣ ಪಡೆಗಳನ್ನು ಮಣಿಸಿ ಚಾಂಪಿಯನ್ ಆದೀತೇ ಎನ್ನುವ ಕೌತುಕವೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.