ಬೆಂಗಳೂರು: ಐಸಿಸಿ ಪ್ರಕಟಿಸಿದ ವಿಶ್ವಕಪ್(ODI World Cup Team) ತಂಡದಲ್ಲಿ ಭಾರತ ತಂಡದ 6 ಆಟಗಾರರು ಸ್ಥಾನ ಪಡೆದಿದ್ದಾರೆ. ಒಟ್ಟು 6 ತಂಡಗಳಿಂದ ಆಟಗಾರರ ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮ ಅವರೇ ತಂಡಕ್ಕೆ ನಾಯಕನಾಗಿದ್ದಾರೆ. ಅಚ್ಚರಿ ಎಂದರೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಭಾರತ ತಂಡದಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರು ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಿಂದ 4 ಶತಕ ಬಾರಿಸಿದ ಕ್ವಿಂಟನ್ ಡಿ ಕಾಕ್, ನ್ಯೂಜಿಲ್ಯಾಂಡ್ ತಂಡದಿಂದ ಡ್ಯಾರಿಲ್ ಮಿಚೆಲ್, ಆಸ್ಟ್ರೇಲಿಯಾ ತಂಡದಿಂದ ದ್ವಿಶತಕ ವೀರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆ್ಯಡಂ ಜಂಪಾ ಅವಕಾಶ ಪಡೆದಿದ್ದಾರೆ. ಲಂಕಾ ತಂಡದಿಂದ ದಿಲ್ಶಾನ್ ಮಧುಶಂಕ ಕಾಣಿಸಿಕೊಂಡಿದ್ದಾರೆ.
ಐಸಿಸಿ ವಿಶ್ವಕಪ್ ತಂಡ
ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮ(ನಾಯಕ), ವಿರಾಟ್ ಕೊಹ್ಲಿ, ಡ್ಯಾರಿಲ್ ಮಿಚೆಲ್, ಕೆ.ಎಲ್ ರಾಹುಲ್, ಗ್ಲೆನ್ ಮ್ಯಾಕ್ಸ್‌ವೆಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ದಿಲ್ಶಾನ್ ಮಧುಶಂಕ, ಆ್ಯಡಂ ಜಂಪಾ. 12ನೇ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೊಟ್ಜಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ Mitchell Marsh: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಆಸ್ಟ್ರೇಲಿಯಾ ಆಟಗಾರ! ಕ್ರಿಕೆಟ್ ಪ್ರೇಮಿಗಳ ಆಕ್ರೋಶ
Best of the best 😍
— ICC Cricket World Cup (@cricketworldcup) November 20, 2023
Revealing the official CWC23 Team of the Tournament 👇https://t.co/WSWrtzcDzb
ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್ನಲ್ಲಿ 95.62 ಸರಾಸರಿಯಲ್ಲಿ 765 ರನ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ 2003ರ ಆವೃತ್ತಿಯಲ್ಲಿ 673 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದರು.
ಮ್ಯಾಕ್ಸ್‌ವೆಲ್ ನೆದರ್‌ಲ್ಯಾಂಡ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೇವಲ 44 ಎಸೆತಗಳಲ್ಲಿ 106 ರನ್ ಬಾರಿಸಿ ವಿಶ್ವಕಪ್ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದರು. ಅಲ್ಲದೆ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 201 ಬಾರಿಸಿ ಮಿಂಚಿದ್ದರು.
ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ವಿರಾಟ್ ಕೊಹ್ಲಿ
ವಿಶ್ವಕಪ್ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಅವರು 11 ಪಂದ್ಯಗಳನ್ನು ಆಡಿ ಒಟ್ಟು 765 ರನ್ ಬಾರಿಸಿ ಅತ್ಯಧಿಕ ರನ್ಗಳಿಸಿದ ಆಟಗಾರ ಎನಿಸಿಕೊಂಡರು. ಅವರ ಈ ಸಾಧನೆಗೆ ಈ ಪ್ರಶಸ್ತಿ ಒಲಿದಿದೆ.
ಫೈನಲ್ನಲ್ಲಿ ಸೋಲು ಕಂಡ ಭಾರತ
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 137 ರನ್ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.