ಸಿಡ್ನಿ: ವಿದಾಯ ಪಂದ್ಯ ಆಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್(David Warner) ಅವರ ಕಳೆದುಹೋಗಿದ್ದ ಗ್ರೀನ್ ಬ್ಯಾಗಿ ಕ್ಯಾಪ್ ಮತ್ತೆ ಅವರ ಕೈ ಸೇರಿದೆ. ಪಾಕಿಸ್ತಾನ ವಿರುದ್ಧದ ಪಿಂಕ್ ಟೆಸ್ಟ್ ಪಂದ್ಯ ವಾರ್ನರ್ ಪಾಲಿಗೆ ವಿದಾಯ ಪಂದ್ಯವಾಗಿದೆ. ಈ ಪಂದ್ಯವನ್ನಾಡಲು ಸಿಡ್ನಿಗೆ ತೆರಳುವ ವೇಳೆ ಅವರ ಗ್ರೀನ್ ಕ್ಯಾಪ್ ಕಳೆದು ಹೋಗಿತ್ತು.
ಗ್ರೀನ್ ಕ್ಯಾಪ್ ಕಳೆದುಕೊಂಡ ತಕ್ಷಣ ವಾರ್ನರ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡುವ ಮೂಲಕ ದಯವಿಟ್ಟು ಯಾರಾದರೂ ಈ ಕ್ಯಾಚ್ ತೆಗೆದುಕೊಂಡಿದ್ದರೆ, ಅಥವಾ ಸಿಕ್ಕರೆ ನನಗೆ ಮರಳಿಸಿ. ನಿಮಗೆ ಬೇರೆ ಕ್ಯಾಪ್ ಕೊಡುತ್ತೇನೆ ಎಂದು ಭಾವನಾತ್ಮಕ ಮನವಿ ಮಾಡಿಕೊಂಡಿದ್ದರು. ಇದೀಗ ಅವರ ನೆಚ್ಚಿನ ಕ್ಯಾಪ್ ಮತ್ತೆ ಅವರ ಕೈ ಸೇರಿದೆ.
“ಎಲ್ಲರಿಗೂ ನಮಸ್ಕಾರ, ನನ್ನ ಅತ್ಯಮೂಲ್ಯ ಬ್ಯಾಗಿ ಗ್ರೀನ್ ಕ್ಯಾಪ್ ಮತ್ತೆ ಮರಳಿ ನನ್ನ ಕೈಸೇರಿದೆ. ಇದನ್ನು ನಿಮ್ಮ ಮುಂದೆ ಹೇಳಲು ತುಂಬಾ ಸಂತೋಷವಾಗುತ್ತಿದೆ. ಜತೆಗೆ ಸಮಾಧಾನ ಕೂಡ ಆಗುತ್ತಿದೆ. ನನ್ನ ಕ್ಯಾಪ್ ಹುಡುಕಲು ನೆರವಾದ ಎಲ್ಲರಿಗೂ ಧನ್ಯವಾದಗಳು ಮತ್ತು ನಾನು ತುಂಬಾ ಕೃತಜ್ಞನಾಗಿದ್ದೇನೆ. ಸರಕು ಸಾಗಣೆ ಕಂಪನಿ, ನಮ್ಮ ಹೋಟೆಲ್‌ಗಳು ಮತ್ತು ತಂಡದ ನಿರ್ವಹಣೆಯ ಎಲ್ಲರಿಗೂ ಧನ್ಯವಾದಗಳು” ಎಂದು ಕ್ಯಾಪ್ ಮರಳಿ ಸಿಕ್ಕ ಬಳಿಕ ವಾರ್ನರ್ ವಿಡಿಯೊ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಮಗಳ ಆಟಿಕೆ ಬ್ಯಾಗ್ನಲ್ಲಿ ಪತ್ತೆ
ಎಲ್ಲೇ ಹುಡುಕಿದರೂ ಸಿಗದ ವಾರ್ನರ್ ಅವರ ಕ್ಯಾಪ್ ಸಿಡ್ನಿಯ ಹೋಟೆಲ್ ರೂಂನಲ್ಲಿ ಪತ್ತೆಯಾಗಿದೆ. ಅಚ್ಚರಿ ಎಂದರೆಎ ವಾರ್ನರ್ ತಮ್ಮ ಮಗಳಿಗಾಗಿ ಖರೀದಿಸಿದ್ದ ಆಟಿಕೆಗಳ ಬ್ಯಾಗ್ ಜತೆ ಈ ಗ್ರೀನ್ ಕ್ಯಾಪ್ ಕೂಡಾ ಪತ್ತೆಯಾಗಿದೆ. ಆದರೆ ಕ್ಯಾಪ್ ಈ ಬ್ಯಾಗ್ನಲ್ಲಿ ಹೇಗೆ ಬಂತು, ಯಾರು ಇದನ್ನು ಹಾಕಿದ್ದಾರೆ ಎನ್ನುವುದು ಮಾತ್ರ ನಿಗೂಢ.
ಇದನ್ನೂ ಓದಿ David Warner : ವಿಶ್ವದ ಭಯಂಕರ ಬೌಲರ್ ಯಾರೆಂದು ವಿವರಿಸಿದ ಡೇವಿಡ್ ವಾರ್ನರ್
ವಾರ್ನರ್ 2011 ರಲ್ಲಿ ಮೊದಲ ಟೆಸ್ಟ್ ಪಂದ್ಯವಾಡುವಾಗ ಈ ಕ್ಯಾಪ್ ತೊಟ್ಟಿದ್ದರು. ಹೀಗಾಗಿ ಈ ಕ್ಯಾಪ್ನೊಂದಿಗೆ ಕಳೆದ 12 ವರ್ಷಗಳಿಂದ ಭಾವನಾತ್ಮಕ ನಂಟಿದೆ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಇದನ್ನು ತೊಡಬೇಕು ಎನ್ನುವುದು ಅವರ ಅಭಿಲಾಷೆಯಾಗಿತ್ತು. ಆದರೆ ಅದು ಕಳವಾಗಿತ್ತು. ಇದೀಗ ಮತ್ತೆ ಅವರಿಗೆ ಈ ಕ್ಯಾಪ್ ಲಭಿಸಿದೆ. ಈಗ ಅವರ ವಿದಾಯವೂ ಸ್ಮರಣೀಯವಾಗಲಿದೆ.
ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಣೆ
ಡೇವಿಡ್ ವಾರ್ನರ್ (David Warner) ಅವರು ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಅವಶ್ಯಕತೆ ಬಿದ್ದರೆ ತಂಡದ ಪರವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಆಡುತ್ತೇನೆ ಎಂದು ಕೂಡ ಡೇವಿಡ್ ವಾರ್ನರ್ ಘೋಷಿಸಿದ್ದಾರೆ. ಹಾಗೆಯೇ, ಚಾಂಪಿಯನ್ಸ್ ಟ್ರೋಫಿಯೇ 37 ವರ್ಷದ ಡೇವಿಡ್ ವಾರ್ನರ್ ಅವರಿಗೆ ಕೊನೆಯ ಏಕದಿನ ಸರಣಿ ಆಗಲಿದೆ ಎಂದು ಹೇಳಲಾಗುತ್ತಿದೆ. “ನಾನು ಟೆಸ್ಟ್ ಕ್ರಿಕೆಟ್ ಜತೆಗೆ ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುತ್ತಿದ್ದೇನೆ. ಏಕದಿನ ವಿಶ್ವಕಪ್ ಗೆಲುವು ಸಾಧಿಸಿದ ಬಳಿಕ ನನ್ನಲ್ಲಿ ಇಂತಹದ್ದೊಂದು ನಿರ್ಧಾರ ಮೂಡಿದೆ. ಭಾರತದಲ್ಲಿ ಏಕದಿನ ವಿಶ್ವಕಪ್ ಗೆಲುವು ಸಾಧಿಸಿರುವುದು ಪ್ರಮುಖ ಸಾಧನೆಯಾಗಿದೆ” ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.