ಬರ್ಮಿಂಗ್ಹಮ್: ಅತ್ಯಂತ ಕುತೂಹಲಕಾರಿಯಾಗಿ ನಡೆದ ಆ್ಯಶಸ್ ಸರಣಿಯ (Ashes 2023) ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 2 ವಿಕೆಟ್ ರೋಚಕ ವಿಜಯ ದಾಖಲಿಸಿದೆ. ಕೊನೇ ಕ್ಷಣದವರೆಗೂ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಈ ಪಂದ್ಯದಲ್ಲಿ ಕೊನೆಗೂ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿದ್ದ ಪ್ಯಾಟ್ ಕಮಿನ್ಸ್ ಪಡೆಗೆ ಮತ್ತೊಂದು ಸ್ಮರಣೀಯ ಗೆಲುವು ಲಭಿಸಿತು. ಅಲ್ಲದೆ, ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.
ಇಲ್ಲಿನ ಎಜ್ಬಾಸ್ಟನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕೊನೇ ಇನಿಂಗ್ಸ್ನಲ್ಲಿ 281 ರನ್ ಬೇಕಾಗಿತ್ತು. ಅಂತೆಯೇ ನಾಲ್ಕನೇ ದಿನ 3 ವಿಕೆಟ್ ಕಳೆದುಕೊಂಡು 107 ರನ್ ಬಾರಿಸಿತ್ತು ಕೊನೇ ದಿನ ಗೆಲುವಿಗೆ 174 ಮಾತ್ರ ಬೇಕಾಗಿದ್ದ ಕಾರಣ ಪಂದ್ಯ ಸುಲಭವಾಗಿ ಆಸೀಸ್ ಪಡೆಯ ಕೈವಶವಾಗುವುದು ಎಂದು ಅಂದುಕೊಳ್ಳಲಾಗಿತ್ತು. ಆದರೆ, ಬೆಳಗ್ಗಿನ ಅವಧಿಯಲ್ಲಿ ಮಳೆ ಸುರಿದ ಕಾರಣ ಮೊದಲ ಅವಧಿಯ ಪಂದ್ಯ ನಷ್ಟಗೊಂಡಿತು. ಭೋಜನ ವಿರಾಮದ ಅವಧಿಗೆ ಶುರುವಾದ ಪಂದ್ಯ ನಿಧಾನವಾಗಿ ರೋಚಕತೆಯ ಕಡೆಗೆ ಸಾಗಿತು. ಒಂದೊಂದೆ ವಿಕೆಟ್ಗಳನ್ನು ಪಡೆಯಲು ಶುರು ಮಾಡಿದ ಇಂಗ್ಲೆಂಡ್ ತಂಡ ವಿಜಯ ಲಕ್ಷ್ಮೀಯನ್ನು ಒಲಿಸಿಕೊಳ್ಳುವುದಕ್ಕೆ ಯತ್ನಿಸಿತು. ಆದರೆ, ಉಸ್ಮಾನ್ ಖ್ವಾಜಾ (65) ಇಂಗ್ಲೆಂಡ್ ಗೆಲುವಿಗೆ ಅವಕಾಶ ನೀಡಿಲ್ಲ. ಪಂದ್ಯದ ಕೊನೇ ನಾಲ್ಕು ಓವರ್ಗಳು ಬಾಕಿ ಇರುವಾಗ 8 ವಿಕೆಟ್ ನಷ್ಟಕ್ಕೆ 282 ರನ್ ಬಾರಿಸಿ ಗೆಲುವು ಸಾಧಿಸಿತು.
ಒಂದು ಹಂತದಲ್ಲಿ ಸತತವಾಗಿ ವಿಕೆಟ್ಗಳು ಪತನಗೊಳ್ಳು ಆರಂಭಿಸಿದ ಕಾರಣ ಇಂಗ್ಲೆಂಡ್ ತಂಡ ಗೆಲುವು ಸಾಧಿಸುತ್ತದೆ ಎಂಬ ಪರಿಸ್ಥಿತಿ ಸೃಷ್ಟಿಯಾಯಿತು. ಆದರೆ, ನಾಯಕ ಪ್ಯಾಟ್ ಕಮಿನ್ಸ್ (44) ಹಾಗೂ ಸ್ಪಿನ್ನರ್ ನೇಥನ್ ಲಯಾನ್ (16) ಇಂಗ್ಲೆಂಡ್ ಬೌಲರ್ಗಳ ಆಕ್ರಮಣವನ್ನು ಮೆಟ್ಟಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟರು. ಅದಕ್ಕಿಂತ ಮೊದಲು ನೈಟ್ ವಾಚ್ಮನ್ ಸ್ಕಾಟ್ ಬೋಲ್ಯಾಂಡ್ (20), ಟ್ರಾವಿಸ್ ಹೆಡ್ (16), ಕ್ಯಾಮೆರಾನ್ ಗ್ರೀನ್ (28), ಅಲೆಕ್ಸ್ ಕ್ಯೇರಿ (20) ತಂಡದ ಗೆಲುವಿಗೆ ತಮ್ಮ ಕೊಡುಗೆಗಳನ್ನು ಕೊಟ್ಟರು. ಸಂಕಷ್ಟದ ಸಮಯದಲ್ಲಿ ತಂಡವನ್ನು ಗೆಲ್ಲಿಸಿದ ನಾಯಕ ಪ್ಯಾಟ್ ಕಮಿನ್ಸ್ ಗೆಲುವಿನ ವಿಜಯೋತ್ಸವ ಆಚರಿಸಿದರು.
ಇಂಗ್ಲೆಂಡ್ ತಂಡ ಬೌಲಿಂಗ್ ವಿಭಾಗದಲ್ಲಿ ಸ್ಟುವರ್ಟ್ ಬ್ರಾಡ್ (62 ರನ್ಗೆ 3 ವಿಕೆಟ್), ಒಲಿ ರಾಬಿನ್ಸನ್ (39ಕ್ಕೆ2), ಮೊಯೀನ್ ಅಲಿ, ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ತಲಾ ಒಂದು ವಿಕೆಟ್ ಉರುಳಿಸ ಜಯಕ್ಕಾಗಿ ಹೋರಾಟ ನಡೆಸಿದರು. ಆದರೆ, ಅವರಿಗೆ ಯಶಸ್ಸು ಲಭಿಸಲಿಲ್ಲ.
ಇದನ್ನೂ ಓದಿ : Team India : ರೋಹಿತ್ಗೆ ಇಲ್ಲ ರೆಸ್ಟ್, ಪೂಜಾರಗೂ ಉಂಟು ಚಾನ್ಸ್!
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ಗೆ 396 ರನ್ ಬಾರಿಸಿ ಡಿಕ್ಲೇರ್ ಮಾಡಿದರೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 386 ರನ್ಗಳಿಗೆ ಆಲ್ಔಟ್ ಆಗಿತ್ತು. ಇಂಗ್ಲೆಂಡ್ ತಂಡ ತನ್ನ ಎರಡನೇ ಇನಿಂಗ್ಸ್ ಆಟವನ್ನು 2 ವಿಕೆಟ್ ಕಳೆದುಕೊಂಡು 28 ರನ್ಗಳಿಂದ ಆರಂಭಿಸಿತ್ತು. ಜೋ ರೂಟ್ (46), ಹ್ಯಾರಿ ಬ್ರೂಕ್ (46) ಹಾಗೂ ಬೆನ್ಸ್ಟೋಕ್ಸ್ (43) ಅವರ ಪ್ರಯತ್ನದ ಹೊರತಾಗಿಯೂ ಇಂಗ್ಲೆಂಡ್ ತಂಡ 273 ರನ್ಗಳಿಗೆ ಆಲ್ಔಟ್ ಆಯಿತು.