Site icon Vistara News

AUS vs WI: ಭಾರತದ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಆಸ್ಟ್ರೇಲಿಯಾ; ಏನದು?

Australia vs West Indies, 3rd ODI

ಸಿಡ್ನಿ: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ತಂಡವು ಹೊಸ ದಾಖಲೆಯೊಂದನ್ನು ಬರೆದಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 1000 ಪಂದ್ಯಗಳನ್ನಾಡಿದ ವಿಶ್ವದ 2ನೇ ತಂಡ ಎಂಬ ಸಾಧನೆ ಮಾಡಿದೆ.

ಇದಕ್ಕೂ ಮುನ್ನ ಭಾರತ ತಂಡ ಮಾತ್ರ ಈ ಸಾಧನೆ ಮಾಡಿತ್ತು. ಅಚ್ಚರಿ ಎಂದರೆ ಉಭಯ ತಂಡಗಳು ಕೂಡ ಈ ಸಾಧನೆ ಮಾಡಿದ್ದು ವಿಂಡೀಸ್​ ವಿರುದ್ಧದ ಪಂದ್ಯವನ್ನಾಡುವ ಮೂಲಕವೇ. 2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ತಂಡವು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 1000 ಪಂದ್ಯಗಳನ್ನಾಡಿದ ಮೊದಲ ತಂಡ ಎನಿಸಿಕೊಂಡಿತ್ತು. ಭಾರತ 1055 ಪಂದ್ಯಗಳು ಆಡಿದೆ.

ಆಸ್ಟ್ರೇಲಿಯಾ 1000 ಪಂದ್ಯಗಳನ್ನಾಡಿದೆ. ಉಭಯ ತಂಡಗಳನ್ನು ಹೊರತುಪಡಿಸಿ ಬೇರೆ ಯಾವುದೇ ತಂಡ ಏಕದಿನ ಕ್ರಿಕೆಟ್​ನಲ್ಲಿ ಸಾವಿರ ಪಂದ್ಯಗಳನ್ನಾಡಿರುವ ಸಾಧನೆಯನ್ನು ಮಾಡಿಲ್ಲ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ. ಪಾಕ್​ 970 ಏಕದಿನ ಪಂದ್ಯಗಳನ್ನು ಆಡಿದೆ. ಸಾವಿರ ಪಂದ್ಯಗಳನ್ನು ಪೂರ್ತಿಗೊಳಿಸಲು ಪಾಕ್​ ಇನ್ನೂ 30 ಪಂದ್ಯಗಳನ್ನಾಡಬೇಕಿದೆ. 912 ಏಕದಿನ ಪಂದ್ಯಗಳನ್ನು ಆಡಿರುವ ಶ್ರೀಲಂಕಾ ತಂಡ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಇದಕ್ಕೆ ದಾಖಲೆಯ 6 ವಿಶ್ವಕಪ್ ಟ್ರೋಫಿ ಗೆದ್ದಿರುವುದೇ ಉತ್ತಮ ನಿದರ್ಶನ. 1987, 1999, 2003, 2007, 2015 ಮತ್ತು 2023ರಲ್ಲಿ ಆಸೀಸ್​ ತಂಡ ವಿಶ್ವಕಪ್​ ಗೆದ್ದಿತ್ತು.

ಇದನ್ನೂ ಓದಿ IND vs ZIM: ಭಾರತ-ಜಿಂಬಾಬ್ವೆ ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ

ಸ್ಮರಣೀಯ ಪಂದ್ಯ ಗೆದ್ದ ಆಸೀಸ್​


ಸಾವಿರನೇ ಏಕದಿನ ಪಂದ್ಯದಲ್ಲಿ ಆಡಲಿಳಿದ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿ ಪಂದ್ಯವನ್ನು ಸ್ಮರಣೀಯವಾಗಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ವೆಸ್ಟ್ ಇಂಡೀಸ್ ತಂಡವು 24.1 ಓವರ್​ಗಳಲ್ಲಿ ಕೇವಲ 86 ರನ್​ಗಳಿಸಿ ಆಲೌಟ್ ಆಗಿತ್ತು. 87 ರನ್​ಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯಾ ತಂಡವು 6.5 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಜತೆಗೆ ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡಿತು. ಉಭಯ ತಂಡಗಳು ಇನ್ನು ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಮೊದಲ ಪಂದ್ಯ ಫೆ.9ರಂದು ನಡೆಯಲಿದೆ.

Exit mobile version