ಬರ್ಮಿಂಗ್ಹಮ್: ಬೌಲರ್ಗಳ ಪರಾಕ್ರಮ ಹಾಗೂ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ತಂಡ ಇಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ (Ashes 2023) ಮೊದಲ ಟೆಸ್ಟ್ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಗೆಲುವಿನ ಅವಕಾಶವನ್ನು ಸೃಷ್ಟಿಮಾಡಿಕೊಂಡಿದೆ. ಪಂದ್ಯದ ಕೊನೇ ದಿನವಾದ ಮಂಗಳವಾರ ಆಸ್ಟ್ರೇಲಿಯಾ ತಂಡದ ಗೆಲುವಿಗೆ 174 ರನ್ಗಳ ಅಗತ್ಯವಿದ್ದು ಇನ್ನೂ ಏಳು ವಿಕೆಟ್ಗಳು ಬಾಕಿ ಇವೆ. ಇಂಗ್ಲೆಂಡ್ ಬೌಲರ್ಗಳು ಸಾಹಸ ತೋರದ ಹೊರತಾಗಿ ಗೆಲುವು ಬಹುತೇಕ ಆಸ್ಟ್ರೇಲಿಯಾಗೆ ಸಿಗಲಿದೆ.
ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಪ್ರವಾಸಿ ಆಸ್ಟ್ರೇಲಿಯಾ ತಂಡ ಎರಡನೇ ಇನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡ 107 ರನ್ ಬಾರಿಸಿದೆ. ಪ್ಯಾಟ್ ಕಮಿನ್ಸ್ ಬಳಗ ಇಂಗ್ಲೆಂಡ್ ತಂಡ ನೀಡಿದ್ದ 281 ರನ್ಗಳ ಗುರಿಯನ್ನು ಬೆನ್ನಟ್ಟುತ್ತಿದ್ದು, 30 ಓವರ್ಗಳಲ್ಲಿ ಅಗತ್ಯ ರನ್ಗಳನ್ನು ಗಳಿಸಿದೆ. ಪಿಚ್ ಸಪಾಟಾಗಿರುವ ಕಾರಣ ಕೊನೇ ದಿನ ಆಸ್ಟ್ರೇಲಿಯಾ ತಂಡಕ್ಕೆ ಉಳಿದ ರನ್ಗಳನ್ನು ಗಳಿಸುವುದು ಕಷ್ಟವಲ್ಲ ಎಂಬುದು ಕ್ರಿಕೆಟ್ ಪಂಡಿತರ ವಿಶ್ಲೇಷಣೆಯಾಗಿದೆ.
ಇದನ್ನೂ ಓದಿ : Ashes 2023 : 3ನೇ ದಿನದಾಟಕ್ಕೆ ಮಳೆಯ ಅಡ್ಡಿ; ಸಮತೋಲನದಲ್ಲಿ ಮೊದಲ ಟೆಸ್ಟ್
ಪಂದ್ಯ ನಾಲ್ಕನೇ ದಿನ ಆರಂಭದಲ್ಲಿ ಇಂಗ್ಲೆಂಡ್ ತಂಡ ತನ್ನ ಎರಡನೇ ಇನಿಂಗ್ಸ್ ಆಟವನ್ನು 2 ವಿಕೆಟ್ ಕಳೆದುಕೊಂಡು 28 ರನ್ಗಳಿಂದ ಆರಂಭಿಸಿತ್ತು. ಜೋ ರೂಟ್ (46), ಹ್ಯಾರಿ ಬ್ರೂಕ್ (46) ಹಾಗೂ ಬೆನ್ಸ್ಟೋಕ್ಸ್ (43) ಅವರ ಪ್ರಯತ್ನದ ಹೊರತಾಗಿಯೂ ಇಂಗ್ಲೆಂಡ್ ತಂಡ 273 ರನ್ಗಳಿಗೆ ಆಲ್ಔಟ್ ಆಯಿತು. ಅದರೊಂದಿಗೆ ಹೀಗಾಗಿ ಆಸ್ಟ್ರೇಲಿಯಾ ತಂಡ ಸಣ್ಣ ಮೊತ್ತದ ಗುರಿಯನ್ನು ಪಡೆಯಿತು.
ಆಸ್ಟ್ರೇಲಿಯಾ ಬೌಲಿಂಗ್ ಪರ ನಾಯಕ ಪ್ಯಾಟ್ ಕಮಿನ್ಸ್ 4 ವಿಕೆಟ್ ಉರುಳಿಸಿದರೆ, ಸ್ಪಿನ್ನರ್ ನೇಥಲ್ ಲಯಾನ್ ಕೂಡ 4 ವಿಕೆಟ್ ತಮ್ಮದಾಗಿಸಿಕೊಂಡರು. ಉಳಿದೆರಡು ವಿಕೆಟ್ಗಳನ್ನು ಹೇಜಲ್ವುಡ್ ಹಾಗೂ ಬೋಲ್ಯಾಂಡ್ ತಮ್ಮದಾಗಿಸಿಕೊಂಡರು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಮೊದಲ ವಿಕೆಟ್ಗೆ 61 ರನ್ ಬಾರಿಸಿತು. ಹೀಗಾಗಿ ಸುಲಭವಾಗಿ ಗುರಿ ಮುಟ್ಟುವ ನಿರೀಕ್ಷೆ ಹುಟ್ಟಿತು. ಬಳಿಕ ಬ್ರಾಡ್ ಸತತವಾಗಿ ಎರಡು ವಿಕೆಟ್ ಪಡೆಯುವ ಮೂಲಕ ಆಸೀಸ್ ಬ್ಯಾಟರ್ಗಳ ರನ್ ಗಳಿಕೆಗೆ ಕಡಿವಾಣ ಹಾಕಿದರು. ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಉಸ್ಮಾನ್ ಖ್ವಾಜಾ 34 ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ.
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ಗೆ 396 ರನ್ ಬಾರಿಸಿ ಡಿಕ್ಲೇರ್ ಮಾಡಿದರೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 386 ರನ್ಗಳಿಗೆ ಆಲ್ಔಟ್ ಆಗಿತ್ತು.