ಇಂದೋರ್: ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಭಾರತ ತವರಿನಲ್ಲೇ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಒಂದನ್ನು ಗೆದ್ದಿರುವ ಕನ್ನಡಿಗ ಕೆ.ಎಲ್ ರಾಹುಲ್ ಪಡೆ ಮತ್ತೊಂದು ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಭಾನುವಾರ ನಡೆಯುವ ಇತ್ತಂಡಗಳ ಮುಖಾಮುಖಿಯಲ್ಲಿ(India vs Australia, 2nd ODI) ಭಾರತ ತಂಡ ಗೆದ್ದರೆ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆಲುವು ದಾಖಲಿಸಿದೆ.
ಕಳಪೆ ಫೀಲ್ಡಿಂಗ್ಗೆ ಬೇಕಿದೆ ತುರ್ತು ಚೇತರಿಕೆ
ಸ್ಟಾರ್ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಅನುಪಸ್ಥಿತಿಯಲ್ಲಿಯೂ ಭಾರತ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ನಿಜಕ್ಕೂ ಮೆಚ್ಚಲೇ ಬೇಕು. ಆದರೆ ಮೊದಲ ಪಂದ್ಯದಂತೇ ಈ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ನಡೆಸಿದರೆ ಕೈ ಸುಟ್ಟುಕೊಳ್ಳುವುದು ಖಚಿತ. ನಾಯಕ ರಾಹುಲ್ ಸೇರಿ ಎಲ್ಲ ಆಟಗಾರರು ಮಿಸ್ ಪೀಲ್ಡಿಂಗ್, ರನೌಟ್, ಕ್ಯಾಚ್ ಕೈಚೆಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದರು. ಇದಲ್ಲದೇ ವಿಶ್ವಕಪ್ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ಕಳಪೆ ಫೀಲ್ಡಿಂಗ್ ನಡೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲೂ ರಾಹುಲ್ ಅವರನ್ನು ವಿಶ್ವಕಪ್ ಟೂರ್ನಿಯಲ್ಲಿ ಪ್ರಧಾನ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ ಆದರೆ ಅವರ ಕಳಪೆ ಕೇತ್ರರಕ್ಷಣೆ ನೋಡುವಾಗ ಟೀಮ್ ಮ್ಯಾನೆಜ್ಮೆಂಟ್ಗೆ ತಲೆ ನೋವು ತಂದಿದೆ. ದ್ವಿತೀಯ ಪಂದ್ಯದಲ್ಲಿ ಎಲ್ಲ ತಪ್ಪುಗಳನ್ನು ಸರಿಪಡಿಸಲೇ ಬೇಕಾದ ಒತ್ತಡ ರಾಹುಲ್ ಮುಂದಿದೆ.
ಆಸೀಸ್ಗೆ ಮಾಡು ಇಲ್ಲವೇ ಮಡಿ ಪಂದ್ಯ
ಅನುಭವಿಗಳಿಂದಲೇ ಕೂಡಿದ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಪಂದ್ಯದಲ್ಲಿ ಸೋಲು ಎದುರಾದ ಕಾರಣ ಸರಣಿಯನ್ನು ಜೀವಂತವಿರಿಸಬೇಕಿದ್ದರೆ, ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಸ್ಥಿತಿ ಎದುರಾಗಿದೆ. ಮಿಚೆಲ್ ಮಾರ್ಷ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಬ್ಯಾಟರ್ಗಳು ಮೊದಲ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿದ್ದರು. ಬೌಲಿಂಗ್ನಲ್ಲಿ ಮಾತ್ರ ಹೇಳುವಷ್ಟರ ಮಟ್ಟಿಗೆ ಪ್ರದರ್ಶನ ಕಂಡುಬರಲಿಲ್ಲ. ಸರಣಿಯನ್ನು ಸಮಬಲಕ್ಕೆ ತರುವ ನಿಟ್ಟಿನಲ್ಲಿ ಆಸೀಸ್ ಈ ಪಂದ್ಯಕ್ಕೆ ಕೆಲ ಆಟಗಾರರನ್ನು ಬದಲಾಯಿಸುವ ಸಾಧ್ಯತೆ ಇದೆ. ಮಿಚೆಲ್ ಸ್ಟಾರ್ಕ್ ತಂಡ ಸೇರಿದರೂ ಅಚ್ಚರಿಯಿಲ್ಲ.
ಇದನ್ನೂ ಓದಿ IND vs AUS 2nd ODI: ಭಾರತ-ಆಸೀಸ್ ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಸಿಡಿಯ ಬೇಕಿದೆ ಅಯ್ಯರ್
ಬೆನ್ನು ನೋವಿನಿಂದ ಚೇತರಿಕೆ ಕಂಡು ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಶ್ರೇಯಸ್ ಅಯ್ಯರ್ಗೆ ಏಷ್ಯಾಕಪ್ನಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಅವರು ಗಾಯಗೊಂಡು ಬಳಿಕದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆಸೀಸ್ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದರೂ ಕಳಪೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ನಡೆಸಿ ಸಂಪೂರ್ಣ ವಿಫಲರಾದರು. ಒಂದೊಮ್ಮೆ ದ್ವಿತೀಯ ಪಂದ್ಯದಲ್ಲಿಯೂ ಅವರು ಇದೇ ಪ್ರದರ್ಶನವನ್ನು ತೋರ್ಪಡಿಸಿದರೆ ವಿಶ್ವಕಪ್ ತಂಡದ ಆಡುವ ಬಳಗದಿಂದ ಹೊರಗುಳಿಯುವುದು ಖಚಿತ. ಈ ನಿಟ್ಟಿನಲ್ಲಿ ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕಿದೆ. ಜತೆಗೆ ಶಾರ್ದೂಲ್ ಠಾಕೂರ್ ಕೂಡ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.