ಮೆಲ್ಬೊರ್ನ್: ವರ್ಷಾರಂಭದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯಾ ಓಪನ್(Australia Open) ಟೂರ್ನಿಗೆ ವಿಶ್ವದ ನಂ.1 ಆಟಗಾರ ಕಾರ್ಲೋಸ್ ಅಲ್ಕರಾಜ್ ಗೈರಾಗಲಿದ್ದಾರೆ. ಗಾಯದ ಸಮಸ್ಯೆಗೆ ಸಿಲುಕಿದ್ದು ಅವರು ಕೂಟದಿಂದ ಹೊರಬಿಳಲು ಪ್ರಮುಖ ಕಾರಣ.
19 ವರ್ಷದ ಸ್ಪೇನ್ನ ಅಲ್ಕರಾಜ್ ಅಭ್ಯಾಸದ ವೇಳೆ ಬಲಗಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ವಿಶ್ವ ನಂ.2, ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಅಗ್ರ ಶ್ರೇಯಾಂಕಿತರಾಗಿ ಟೂರ್ನಿ ಪ್ರವೇಶಿಸಲಿದ್ದಾರೆ.
ಕಳೆದ ವರ್ಷ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಅಲ್ಕರಾಜ್ ಮೇಲೆ ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲೂ ಹಲವು ನಿರೀಕ್ಷೆ ಇರಿಸಲಾಗಿತ್ತು. ಆದರೆ ಗಾಯದಿಂದಾಗಿ ಅಂತಿಮ ಕ್ಷಣದಲ್ಲಿ ಅವರು ಕೂಟದಿಂದ ಹೊರಬಿದ್ದಿದ್ದಾರೆ.
“ಅಭ್ಯಾಸದ ವೇಳೆ ಗಾಯಗೊಂಡ ಕಾರಣ ನಾನು ಈ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದೇನೆ. ಈ ಬಗ್ಗೆ ಬೇಸರವಿದೆ. ಆದರೆ ಇದು ಕ್ರೀಡೆಯ ಒಂದು ಭಾಗ. ಶೀಘ್ರದಲ್ಲೇ ಚೇತರಿಕೆ ಕಂಡು ಮುಂದಿನ ಟೂರ್ನಿಯಲ್ಲಿ ಕಣಕ್ಕಿಳಿಯುವ ವಿಶ್ವಾಸವಿದೆ” ಎಂದು ಕಾರ್ಲೋಸ್ ಅಲ್ಕರಾಜ್ ಹೇಳಿದ್ದಾರೆ.
“ವಿಶ್ವದ ನಂ.1 ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರು ಗಾಯದಿಂದ ಶೀಘ್ರ ಗುಣಮುಖರಾಗಲಿ” ಎಂದು ಆಸ್ಟ್ರೇಲಿಯಾ ಓಪನ್ ಟೂರ್ನಿಯ ಸಂಘಟಕರು ಹಾರೈಸಿದ್ದಾರೆ. ಇದೇ ವೇಳೆ 7 ಬಾರಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಅಮೆರಿಕದ ವೀನಸ್ ವಿಲಿಯಮ್ಸ್ ಕೂಡ ಗಾಯಗೊಂಡಿರುವ ಕಾರಣ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ | US Open Tennis | ಮಾಜಿ ವಿಶ್ವ ನಂಬರ್ ಆಟಗಾರನಿಗೆ ಯುಎಸ್ ಓಪನ್ ಚಾನ್ಸ್ ಕೂಡ ಮಿಸ್