Site icon Vistara News

ಬಾಸ್ಕೆಟ್‌ಬಾಲ್‌ ಮಹಿಳೆಯರ ಏಷ್ಯನ್‌ ಚಾಂಪಿಯನ್‌ಶಿಪ್‌ನ ಚೊಚ್ಚಲ ಪ್ರವೇಶದಲ್ಲೇ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ

ಏಷ್ಯನ್‌ ಚಾಂಪಿಯನ್‌ಶಿಪ್‌

ಬೆಂಗಳೂರು: ಫಿಬಾ ಅಂಡರ್- 18 ಮಹಿಳೆಯರ ಬಾಸ್ಕೆಟ್‌ಬಾಲ್‌ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಪದಾರ್ಪಣೆ ಮಾಡಿದ ಆವೃತ್ತಿಯಲ್ಲೇ ಆಸ್ಟ್ರೇಲಿಯಾ ತಂಡ ಚಾಂಪಿಯನ್‌ ಆಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಬಾ ಅಂಡರ್- 18 ಮಹಿಳಾ ಏಷ್ಯನ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಚೀನಾ ತಂಡವನ್ನು 81- 55 ಅಂಕಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್‌ಪಟ್ಟ ತನ್ನದಾಗಿಸಿಕೊಂಡಿತು. ಜಪಾನ್ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕಂಚಿನ ಪದಕ ಸ್ವೀಕರಿಸಿತು. 4ನೇ ಸ್ಥಾನವನ್ನು ಚೈನೀಸ್ ತೈಪೆ ಪಡೆದುಕೊಂಡಿತು.

ಫೈನಲ್ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲೇ ಆಸ್ಟ್ರೇಲಿಯಾ ಪ್ರಭುತ್ವ ಸಾಧಿಸಿತು. ಮುಖ್ಯವಾಗಿ ಇಸ್ಲಾ ಜುಫರ್‌ಮ್ಯಾನ್ಸ್ 8 ಅಂಕಗಳ ಮುನ್ನಡೆ ಗಳಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ ಪುಟಿದೆದ್ದ ಚೀನಾ ಆಟಗಾರ್ತಿ ವ್ಯಾಂಗ್ ಝಿಂಗ್ 5 ಪಾಯಿಂಟ್ಸ್ ಸತತವಾಗಿ ಗಳಿಸುವ ಮೂಲಕ ಅಂತರವನ್ನು 21 – 26ಕ್ಕೆ ತಂದರು. ದ್ವಿತೀಯಾರ್ಧವನ್ನು 44-30ರಿಂದ ಆರಂಭಿಸಿದ ಆಸ್ಟ್ರೇಲಿಯಾ ಆಟಗಾರ್ತಿಯರು ಹಿಂದಿರುಗಿ ನೋಡಲಿಲ್ಲ. ಪ್ಯೂಚ್ , ಜುಫರ್‌ಮ್ಯಾನ್ಸ್ ಜೋಡಿ ಮಿಂಚಿನ ಆಟವಾಡಿ ಪಂದ್ಯವನ್ನು ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜುಫರ್‌ಮ್ಯಾನ್ಸ್- ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್

ಇಸ್ಲಾ ಜುಫರ್‌ಮ್ಯಾನ್ಸ್ ಟೂರ್ನಿಯ ಹೆಚ್ಚು ಮೌಲ್ಯಯುತ ಆಟಗಾರ್ತಿ ಎನಿಸಿದರು. ಈ ಕ್ರೀಡಾಕೂಟದಲ್ಲಿ ವಿಜೇತರಾದ ಮೊದಲ 4 ತಂಡಗಳು 2023ರ ಜುಲೈನಲ್ಲಿ ಸ್ಪೇನ್‌ನಲ್ಲಿ ನಡೆಯಲಿರುವ ಅಂಡರ್- 19 ಮಹಿಳೆಯರ ಫಿಬಾ ವಿಶ್ವ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದರು.

ಗಣ್ಯರ ಉಪಸ್ಥಿತಿ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ಅಶ್ವತ್ಥ್‌ ನಾರಾಯಣ್ ರೇಷ್ಮೆ, ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಪಂದ್ಯವನ್ನು ವೀಕ್ಷಿಸಿ ವಿಜೇತರಿಗೆ ಅಭಿನಂದಿಸಿದರು.

ಭಾಗವಹಿಸಿದ್ದ 16 ತಂಡಗಳು

ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 5ರಿಂದ ಸೆಪ್ಟೆಂಬರ್ 11 ಬಾಸ್ಕೆಟ್‌ಬಾಲ್ ಚಾಂಪಿಯನ್ ಶಿಪ್ ನಡೆಯಿತು. ಭಾರತ, ಜಪಾನ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಈ ಕ್ರೀಡಾಕೂಟದಲ್ಲಿ 192 ಕ್ರೀಡಾಪಟುಗಳು, 96 ಅಧಿಕಾರಿಗಳು, 100 ಸ್ವಯಂಸೇವಕರು ಭಾಗವಹಿಸಿದ್ದರು.

ಭಾರತಕ್ಕೆ ಟೂರ್ನಿಯಲ್ಲಿ ಕೊನೆಯ ಸ್ಥಾನ

ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ತಮಿಳುನಾಡಿನ ಸತ್ಯಾ ಕೃಷ್ಣಮೂರ್ತಿ ಮುನ್ನಡೆಸಿದರು ತಂಡದಲ್ಲಿ ಕರ್ನಾಟಕದ ನಿಹಾರಿಕಾ ರೆಡ್ಡಿ ಮತ್ತು ಮೇಖಲಾ ಗೌಡ ಇದ್ದರು. ಭಾರತ ತನ್ನ ಎಲ್ಲಾ ಪಂದ್ಯವನ್ನು ಸೋತು ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆಯಿತು.

Exit mobile version