ನವ ದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ (INDvsAUS) ಎರಡನೇ ಹಣಾಹಣಿ ಎರಡೂವರೆ ದಿನಗಳಲ್ಲಿ ಮುಕ್ತಾಯಗೊಂಡಿದೆ. ಭಾರತ ತಂಡ ಆರು ವಿಕೆಟ್ಗಳ ವಿಜಯದೊಂದಿಗೆ ಸರಣಿಯಲ್ಲಿ 2-0 ಮುನ್ನಡೆಯನ್ನೂ ಪಡೆದುಕೊಂಡಿದೆ. ಮುಂದಿನ ಪಂದ್ಯ ಆರಂಭವಾಗುವುದು ಮಾರ್ಚ್ 1ರಂದು. ಆ ಪಂದ್ಯ ಮಧ್ಯಪ್ರದೇಶದ ಇಂದೋರ್ನಲ್ಲಿ ಆಯೋಜನೆಗೊಂಡಿದೆ. ಪಂದ್ಯ ಆರಂಭಕ್ಕೆ ನಾಲ್ಕು ದಿನಗಳು ಇರುವಾಗ ಆಟಗಾರರು ಅಲ್ಲಿಗೆ ಹೋದರೆ ಸಾಕು. ಹೀಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಜಾಲಿ ಮೂಡ್ನಲ್ಲಿದ್ದಾರೆ. ಅದರಲ್ಲೂ ಪ್ರವಾಸಿ ಆಸ್ಟ್ರೇಲಿಯಾ ತಂಡದ ಆಟಗಾರರು ಭಾರತದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಈ ಬಾರಿ ಪ್ರವಾಸಕ್ಕೆ ಕುಟುಂಬ ಸಮೇತ ಬಂದಿದ್ದಾರೆ. ಡೆಲ್ಲಿಯಲ್ಲಿರುವರ ಅವರು ಕುಟುಂಬ ಸಮೇತ ಡೆಲ್ಲಿ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳಿಗೆ ಟ್ರಿಪ್ ಹೋಗುತ್ತಿದ್ದಾರೆ. ಹುಮಾಯುನ್ನ ಗೋರಿಯ ವೀಕ್ಷಣೆಗೆ ಬಂದಿರುವ ಅವರು ಅದರ ಮುಂದೆ ನಿಂತುಕೊಂಡು ಫೋಟೋ ತೆಗೆಸಿಕೊಂಡು ಶೇರ್ ಮಾಡಿಕೊಂಡಿದ್ದಾರೆ.
ಡೇವಿಡ್ ವಾರ್ನರ್ಗೆ ಭಾರತ ಎಂದರೆ ಬಲು ಪ್ರೀತಿ. ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಹಲವು ವರ್ಷಗಳ ಕಾಲ ಆಡಿರುವ ಅವರು ತಂಡ ತೆಲುಗು ಸಿನಿಮಾ ಇಂಡಸ್ಟ್ರಿ ಹಾಗೂ ಅಲ್ಲಿನ ಜನಜೀವನವನ್ನು ಮೆಚ್ಚಿಕೊಂಡಿದ್ದರು. ತೆಲುಗು ಸಿನಿಮಾಗಳ ಹಾಡಿಗೆ ಡಾನ್ಸ್ ಮಾಡುವುದು, ಡೈಲಾಗ್ಗಳನ್ನು ಹೊಡೆಯುವುದೆಲ್ಲ ಮಾಡುತ್ತಾರೆ. ಅಂತೆಯೇ ಇದೀಗ ಭಾರತ ಪ್ರವಾಸದಲ್ಲಿರುವ ಅವರು ಇಲ್ಲಿನ ಪ್ರೇಕ್ಷಣಿಯ ಸ್ಥಳಗಳಿಗೆ ಬೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ : David Warner | ನಿವೃತ್ತಿಯ ಸುಳಿವು ಕೊಟ್ಟ ಡೇವಿಡ್ ವಾರ್ನರ್; ಯಾವಾಗ ವಿದಾಯ ಹೇಳುತ್ತಾರೆ?
ಭಾರತ ತಂಡದ ಆಟಗಾರರೂ ಪಂದ್ಯ ಬೇಗ ಮುಕ್ತಾಯಗೊಂಡ ಕಾರಣ ತಿರುಗಾಟದಲ್ಲಿ ನಿರತರಾಗಿದ್ದಾರೆ. ಭಾನುವಾರ ಸಂಜೆ (ಫೆಬ್ರವರಿ 19) ಅವರು ಡೆಲ್ಲಿಯಲ್ಲಿರುವ ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದರು.